ಕೆಜಿಎಫ್ 2 ಚಿತ್ರದ ಯಶಸ್ಸಿನ ಬಳಿಕ ಯಶ್ ಅವರ ತಾಯಿ ಮಾಧ್ಯಮಗಳ ಅನೇಕ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಅವರ ಹಿಂದಿನ ಅನೇಕ ಘಟನೆಗಳನ್ನು ನೆನೆದಿದ್ದಾರೆ. ಯಶ್ ಅವರ ಕುರಿತಾದ ಕೆಲವಷ್ಟು ಯಾರಿಗೂ ತಿಳಿದಿರದ ವಿಷಯಗಳನ್ನು ಬಯಲು ಮಾಡಿದ್ದಾರೆ. ಹೀಗೆ ಸಂದರ್ಶನ ಒಂದರಲ್ಲಿ, ಯಶ್ ಹಾಗೂ ರಾಧಿಕಾ ಪಂಡಿತ್ ಅವರ ವಿವಾಹದ ಸಂದರ್ಭದಲ್ಲಿ ನಡೆದ ಪಾಲಕರ – ಮಕ್ಕಳ ನಡುವಿನ ಸಂವಾದವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ತಾನು ಮಗನಿಗೆ ಹೇಗೆ ತಿಳಿಹೇಳಿದೆ ಎಂದು ಹೇಳಿದ್ದಾರೆ.
ಮಕ್ಕಳ ಮದುವೆ ವಿಚಾರ ಬಂದಾಗ ತಂದೆ ತಾಯಿಗಳು, ಹಿರಿಯರ ಸ್ಥಾನದಲ್ಲಿ ನಿಂತು ತಮ್ಮ ಅನುಭವದ ಮಾತುಗಳನ್ನು ಮಕ್ಕಳ ಜೊತೆಯಲ್ಲಿ ಹಂಚಿಕೊಳ್ಳುವುದು ಸಹಜ. ಮಕ್ಕಳ ಭವಿಷ್ಯ ಚೆನ್ನಾಗಿ ಇರಬೇಕು ಎಂದು ಬಯಸಿ ಕಿವಿ ಮಾತನ್ನು ಮಕ್ಕಳಲ್ಲಿ ಹೇಳುತ್ತಾರೆ. ಬಾಳ ಸಂಗಾತಿಯನ್ನು ಆಯ್ದುಕೊಳ್ಳುವಾಗ ಯಾವೆಲ್ಲ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ವಿವರಿಸುತ್ತಾರೆ. ಇದರ ಅರ್ಥ ಮಕ್ಕಳು ಪೂರ್ತಿಯಾಗಿ ಪಾಲಕರು ಹೇಳಿದಂತೆ ಕೇಳಬೇಕು ಎಂದಲ್ಲ.
ಆದರೆ ಅವರು ಹೇಳಿದ್ದನ್ನು ಅಲ್ಲಗಳಿಯದೆ ಗಮನದಲ್ಲಿಟ್ಟುಕೊಂಡು ನಡೆಯಬೇಕು ಎಂಬುದು. ಮಕ್ಕಳು ಯಾವುದೇ ಕ್ಷೇತ್ರಗಳಲ್ಲಿ ಹೆಸರು ಗಳಿಸಿದವರಾಗಿರಲಿ ಅಥವಾ ದೊಡ್ಡ ಸ್ಥಾನಮಾನವನ್ನು ಪಡೆದಿರಲಿ, ದೊಡ್ಡ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರಲಿ; ತಂದೆ ತಾಯಿಯರಿಗೆ ಮಕ್ಕಳು ಚಿಕ್ಕವರೇ ಬುದ್ಧಿ ಮಾತನ್ನು ಹೇಳುವುದೇ.. ಈ ವಿಚಾರವಾಗಿ ಸೆಲೆಬ್ರಿಟಿಗಳು ಹೊರತಾಗಿಲ್ಲ.
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಕಿರುತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡ ಜೋಡಿಯು ಪರಿಚಿತರಾಗಿ, ಸ್ನೇಹಿತರಾಗಿ, ಇಬ್ಬರ ನಡುವೆ ಬೆಳೆದ ಸಲುಗೆ ಹಾಗೂ ಪ್ರೀತಿಯಿಂದಾಗಿ ಜೀವನಪೂರ್ತಿ ಜೊತೆಯಾಗಿ ಇರಲು ನಿರ್ಧರಿಸಿದರು. ಅದೇ ರೀತಿ ದಾಂಪತ್ಯ ಜೀವನಕ್ಕೆ ಕಾಲಿಡಲು ಎರಡು ಕುಟುಂಬಗಳನ್ನು ಒಪ್ಪಿಸಿ ವಿವಾಹವಾದರು.
ಇದೀಗ ಯಶ್ ಅವರ ತಾಯಿ, ಪುಷ್ಪಾ ತಮ್ಮ ಮಗನ ವಿವಾಹದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಪುಷ್ಪ ಅವರು, “ನಮ್ಮ ಮಗ ಯಶ್, ರಾಧಿಕಾ ಪಂಡಿತ್ ಅವರನ್ನು ಮದುವೆಯಾಗ್ತ್ತೇನೆ ಎಂದು ಹೇಳಿದಾಗ, ನಾನು ಹಾಗೂ ನನ್ನ ಮನೆಯವರು ಇಬ್ಬರೂ ಅವ್ನಿಗೆ ಹೇಳಿದ್ದು ಒಂದೇ ಮಾತು.. ನೋಡಪ್ಪ ಯಶ್ ಇದು ಬಣ್ಣದ ಬದುಕು! ನಾಳೆ ನೀನು ಇಡೀ ದಿನ ಸಿನಿಮಾದಲ್ಲಿ ಬ್ಯುಸಿ ಆಗಿ ಇರಬೇಕಾಗಬಹುದು…ಆ ಸಮಯದಲ್ಲಿ ರಾಧಿಕಾ ಮನೆಯನ್ನು ನೋಡಿಕೊಂಡು ಹೋಗಬೇಕು ಅಂತಾ ಹೇಳಿದ್ದೆ” ಎಂದಿದ್ದಾರೆ.
ಯಶ್ ಅವರಿಗೆ ತಾವು ನೀಡಿದ ಸಲಹೆಯನ್ನು ಪುಷ್ಪಾ ಅವರು ವಿವರಿಸಿದ್ದು ಹೀಗೆ : “ರಾಧಿಕಾ ತುಂಬಾ ಒಳ್ಳೆಯ ಹುಡುಗಿ. ಉತ್ತಮ ಕುಟುಂಬದಿಂದ ಸುಖವಾಗಿ ಬೆಳೆದು ಬಂದವಳು. ಆದರೆ ನೀನು ಶೂನ್ಯವನ್ನು ನೋಡಿ, ಕಷ್ಟಪಟ್ಟು ಬೆಳೆದು ನಿಂತವನು. ಜೀವನದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರು ಸಾವಿರ ಸಲ ಯೋಚನೆ ಮಾಡು… ನಿನ್ನ ನಿರ್ಧಾರದಿಂದ ರಾಧಿಕಾ ಪಂಡಿತ್ ಅವರಿಗೆ ಯಾವುದೇ ತರಹದ ನೋವಾಗಬಾರದು; ಕಷ್ಟ, ತೊಂದರೆ ಆಗಬಾರದು” ಎಂದು ಹೇಳಿದ್ದರಂತೆ.
ಯಶ್ ಅವರ ದಾಂಪತ್ಯ ಜೀವನದ ಕುರಿತಾಗಿಯೂ ಮಾತನಾಡಿದ ಪುಷ್ಪಾ ಅವರು, ” ನನ್ನ ಮಗ ಯಶ್ ಪ್ರತಿನಿತ್ಯವೂ ಸಿನೆಮಾ ಸಿನಿಮಾ ಎನ್ನುತ್ತಾ ತುಂಬಾ ಬ್ಯುಸಿಯಾಗಿ ಇರ್ತ್ತಾನೆ. ಕುಟುಂಬಕ್ಕಾಗಿ ಮೀಸಲಿಡುವ ಸಮಯ ಬಹಳ ಕಡಿಮೆ” ಎಂದಿದ್ದಾರೆ.
ಕೆಜಿಎಫ್ 2 ಚಿತ್ರದ ಗೆಲುವಿನ ಬಳಿಕ ಯಶ್ ರವರು ಕೊಂಚ ಆರಾಮವಾಗಿ ಸಾಗುತ್ತಿದ್ದು, ಕುಟುಂಬದೊಂದಿಗೆ ದಿನವನ್ನು ಕಳೆಯುತ್ತಿದ್ದಾರೆ. ಮುದ್ದಿನ ಮಡದಿ ಹಾಗೂ ಮಕ್ಕಳೊಂದಿಗೆ ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಯಶ್ ಅವರು ಹೊಸ ಚಿತ್ರ ಒಂದನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಸುದ್ದಿಯು ಎಲ್ಲೆಡೆ ಹರಿದಾಡಿದೆ.