2022ನೇ ನಲ್ಲಿ ಅಧಿಸೂಚಿಸಲಾಗಿದ್ದ 13,352 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ (GPSTR) ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯವು (High Court) ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದೆ. ವಿವಾದವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಈ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ ಏಕ ಸದಸ್ಯ ಪೀಠವು ಆಯ್ಕೆ ಪಟ್ಟಿಯನ್ನು ಮರು ರೂಪಿಸುವಂತೆ ಸೂಚನೆ ನೀಡಿತ್ತು.
ಆದರೀಗ ಮರು ವಿಚಾರಣೆಯಲ್ಲಿ ವಿಭಾಗಿಯ ಪೀಠವು ಆ ಆದೇಶವನ್ನು ರದ್ದುಪಡಿಸಿ ಸಮಸ್ಯೆ ಬಗೆಹರಿಸಿ ನೇಮಕಾತಿಗೆ ಅಸ್ತು ಎಂದಿದೆ. ಸರ್ಕಾರದ ಅಧಿಸೂಚನೆಯಂತೆ ಆದಾಯ ಪ್ರಮಾಣಪತ್ರ ಸಲ್ಲಿಸಿರುವವರ ಆಯ್ಕೆ ಅಂತಿಮಗೊಳಿಸಲು ಹಾಗೂ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶ ಬರುವವರೆಗೆ ಮುಂದೂಡುವಂತೆ ಸೂಚಿಸಿದೆ.
ನೊಂದ ಅಭ್ಯರ್ಥಿಗಳು KSAT ಯಲ್ಲಿ ದಾವೆ ಹೂಡಲು ಅವಕಾಶ ನೀಡಲಾಗಿದೆ. ಆದರೆ ಆ ದಾವೆ ಇತ್ಯರ್ಥವಾಗುವವರೆಗೆ ನಿಗದಿತ ನಮೂನೆಯಲ್ಲಿ ಆದಾಯ ಪ್ರಮಾಣ ಪತ್ರ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆ ಮುಂದುವರಿಸುವಂತೆ ಹೈ ಕೋರ್ಟ್ ಸೂಚನೆ ನೀಡಿದೆ. ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಕರ ಕೊರತೆ ಇದೆ, 6 ರಿಂದ 8ನೇ ತರಗತಿಗಳಿಗೆ ಬೋಧಕರ ಕೊರತೆ ಇರುವುದರಿಂದ ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಲ್ಲಿ ಇದು ಬಹಳ ದೊಡ್ಡ ಸಮಸ್ಯೆಯಾಗಿ ಪರಿಗಣಿಸಿದೆ.
ಇದನ್ನು ಮನಗಂಡು ಹೈ ಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ. ಮೊದಲ ಆಯ್ಕೆ ಪಟ್ಟಿಯಲ್ಲದ್ದ 451 ಅಭ್ಯರ್ಥಿಗಳನ್ನು ಜೂನ್ 8, 2023 ರ ಆಯ್ಕೆಪಟ್ಟಿಯಲ್ಲಿ ಬದಲಾವಣೆ ಮಾಡಿತ್ತು. ಹೈಕೋರ್ಟ್ನ ಏಕಸದಸ್ಯ ಪೀಠವು ನೀಡಿದ್ದ ಆದೇಶದ ಪ್ರಕಾರ ರೂಪಿಸಿದ ಹೊಸ ನಿಯಮದಡಿ 451 ಅಭ್ಯರ್ಥಿಗಳು ಬದಲಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಈಗ ನೇಮಕದಿಂದ ಹೊರಗುಳಿದಿರುವ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ 451 ಅಭ್ಯರ್ಥಿಗಳ ಭವಿಷ್ಯವು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಆದೇಶದ ನಂತರ ನಿರ್ಧಾರವಾಗಲಿದೆ.
ಈ ಪ್ರಕರಣದ ವಿವರವನ್ನು ನೋಡುವುದಾದರೆ ರಾಜ್ಯದ ಹಿಂದುಳಿದ ವರ್ಗದ ವಿವಾಹಿತ ಮಹಿಳೆಯನ್ನು ಆಯ್ಕೆಗೆ ಪರಿಗಣಿಸುವಾಗ ಪತಿಯ ಆದಾಯ ಪರಿಗಣನೆಗೆ ಸರ್ಕಾರ ನಿಯಮ ರೂಪಿಸಿತ್ತು. ಆದರೆ ರಾಜ್ಯ ಸರ್ಕಾರದ ಈ ನೀತಿಯನ್ನು ಏಕಸದಸ್ಯ ಪೀಠ ಅಮಾನ್ಯಗೊಳಿಸಿತ್ತು. ಅಭ್ಯರ್ಥಿ ತಂದೆಯ ಜಾತಿ, ಆದಾಯ ಪ್ರಮಾಣ ಪತ್ರ ಆಧರಿಸಲು ಸೂಚನೆ ಕೊಟ್ಟಿತ್ತು.
ಇದೀಗ ಏಕಸದಸ್ಯ ಪೀಠದದ ಈ ಆದೇಶ ರದ್ದುಪಡಿಸಿದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ರಿದ್ದ ವಿಭಾಗೀಯ ಪೀಠವು
ಹೈಕೋರ್ಟ್, 13,352 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಸದರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನಿಯೋಜನೆಯ ನಿರೀಕ್ಷೆಯಲ್ಲಿದ್ದ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಆಯ್ಕೆಯಾಗಿದ್ದರು ನೇಮಕಾತಿ ವಿಳಂಬವಾಗಿರುವುದಕ್ಕೆ ಗೊಂದಲಕ್ಕೊಳಗಾಗಿದ್ದರು ಇದೀಗ ಆಯ್ಕೆಯಾಗಿದ್ದ ಇತರ ಶಿಕ್ಷಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಸ್ತುತವಾಗಿ ರಾಜ್ಯದಲ್ಲಿರುವ ಶಿಕ್ಷಕರ ಕೊರತೆ ನೀಗಿಸಿ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಆಜ್ಞಾಪಿಸಿದೆ. ಈ ಪ್ರಕರಣ ಇತ್ಯರ್ಥವಾಗಲು ಡಿಸೆಂಬರ್ ತನಕ ಕಾಲಾವಕಾಶ ಬೇಕಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ ಎರಡು ತಿಂಗಳು ಮುಂಚೆಯೇ ಸಮಸ್ಯೆ ಒಂದು ಹಂತಕ್ಕೆ ಬಗೆಹರಿದಿರುವುದು ಆಕಾಂಕ್ಷಿಗಳ ಸಂತಸ ಇಮ್ಮಡಿ ಮಾಡಿದೆ. ಮೊದಲ ಪಟ್ಟಿಯಲ್ಲಿ ಆಯ್ಕೆಗೊಂಡು ವಿವಾದದ ಕಾರಣದಿಂದಾಗಿ ಪಟ್ಟಿಯಿಂದ ಹೊರಗುಳಿದಿರುವ ಇತರ 451 ಶಿಕ್ಷಕರ ಭವಿಷ್ಯವು ಕೂಡ ಹಸನಾಗಲಿ ಶೀಘ್ರವಾಗಿ ಅವರ ಸಮಸ್ಯೆಗೂ ಪರಿಹಾರ ಸಿಗಲಿ ಎಂದು ನಾವು ಈ ಮೂಲಕ ಬಯಸುತ್ತೇವೆ.