ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Punith Raj Kumar) ಎಂದರೆ ಕನ್ನಡದ ಜನತೆಗೆ ಎಲ್ಲಿಲ್ಲದ ಅಭಿಮಾನ. ದೊಡ್ಮನೆ ಕುಡಿಯಾಗಿರುವ ಈ ಮಾಣಿಕ್ಯ ಕನ್ನಡಿಗರ ಪಾಲಿಕೆ ಎಂದೆಂದೂ ಪ್ರೀತಿಯ ಅಪ್ಪು. ಅಪ್ಪು ಮೇಲಿನ ಅಭಿಮಾನವನ್ನು ಈಗಾಗಲೇ ಕರ್ನಾಟಕದ ಅಭಿಮಾನಿಗಳು ಸಾಕಷ್ಟು ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಇದೆಲ್ಲದರ ನಡುವೆ ವಿಭಿನ್ನ ರೀತಿಯಲ್ಲಿ ರೈತನೊಬ್ಬ ಅಪ್ಪು ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಗೆ (Remembrance) ತನ್ನದೇ ಆದ ಕಾಣಿಕೆಯನ್ನು ಅರ್ಪಿಸಿದ್ದಾರೆ. ಇದೆ ಕಾರಣಕ್ಕಾಗಿ ಇಂದು ರೈತ ಹಾಗೂ ಆತನ ಕಲೆ ವಿಚಾರ ನಾಡಿನಾದ್ಯಂತ ಸುದ್ದಿ ಆಗುತ್ತಿದ್ದು ಇದರ ಸಂಬಂಧಿತ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ರಾಯಚೂರಿನ ರೈತ ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸಿರುವ ಈ ವಿಶೇಷ ಕಾಣಿಕೆ ವಿವರ ಇಲ್ಲಿದೆ ನೋಡಿ. ಅಕ್ಟೋಬರ್ 29ಕ್ಕೆ ನಾವು ಪುನೀತ್ ರಾಜಕುಮಾರ್ ಅವರ ಎರಡನೇ ಪುಣ್ಯಸ್ಮರಣೆಯನ್ನು ಆಚರಿಸಲಿದ್ದೇವೆ. ಈ ಸಮಯಕ್ಕೆ ಸರಿಯಾಗಿ ಒಂದು ವಿಶೇಷವಾದ ಉಡುಗೊರೆಯನ್ನು ನೀಡಲು ರಾಯಚೂರಿನ ಸಿರವಾರ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್‌ನ ವಿಕಲಚೇತನ ರೈತನೊಬ್ಬರು (Rayachur Farmer Sathya Narayana) ಕಳೆದ ಮೂರು ತಿಂಗಳಿನಿಂದ ಶ್ರಮ ಹಾಕಿ ಕಣ್ಣಲ್ಲಿ ಕಣ್ಣಿಟ್ಟು ಕಾದಿದ್ದಾರೆ.
ತಮ್ಮ ಆರು ಎಕರೆಯ ಜಮೀನಿನಲ್ಲಿ ಎರಡು ಎಕರೆಯನ್ನು ಪುನೀತ್ ರಾಜಕುಮಾರ್ ಅವರ ಚಿತ್ರ ಮೂಡಿಸುವುದಕ್ಕಾಗಿಯೇ ಮೀಸಲಿಟ್ಟು ಸಾವಯವ ಕೃಷಿ ಮೂಲಕ ಇದನ್ನು ಸಾಧಿಸಿದ್ದಾರೆ. 3 ವಿಭಿನ್ನ ತಳಿಗಳಾದ ಕರ್ನಾಟಕದ ಕಾವೇರಿ ಸೋನಾ ಮಸೂರಿ, ಗುಜರಾತ್ ಗೋಲ್ಡನ್ ರೋಜ್ ಮತ್ತು ತೆಲಂಗಾಣದ ಕಾಲಭಟ್ಟಿ ತಳಿಯ 100 ಕೆಜಿ ಬಿತ್ತನೆ ಬೀಜ ತಂದು ಬೆಳೆ ಬೆಳೆದು ಜಪಾನ್ ತಂತ್ರಜ್ಞಾನದ ಬಳಸಿ ಅದರಲ್ಲಿ ಅಪ್ಪು ಭಾವಚಿತ್ರ ಮೂಡುವಂತೆ ಮಾಡಿದ್ದಾರೆ.
ಬರಿಗಣ್ಣಿನಿಂದ ನೋಡುವವರಿಗೆ ಇದು ಕಪ್ಪು ಮಣ್ಣು ಹಾಗೂ ಭತ್ತದ ಪೈರಿನಂತೆ ಕಂಡರೂ ಡ್ರೋನ್ ಕ್ಯಾಮೆರಾದಿಂದ ನೋಡಿದಾಗ ಅಪ್ಪು ಅವರ ಭಾವಚಿತ್ರ ಹಾಗೂ ಕರ್ನಾಟಕ ರತ್ನ ಎಂದು ಬರೆದಿರುವುದು ಕಾಣುತ್ತದೆ. ಕರ್ನಾಟಕ ರತ್ನ ಎಂದು ಬರೆದಿರುವುದೇ 40 ಫೀಟ್ ಎತ್ತರವಾಗಿ ಬೆಳೆದಿದೆ.
ಬರ ಆವರಿಸುವ ಈ ಸಮಯದಲ್ಲೂ ಪ್ರತಿದಿನವೂ ಟ್ಯಾಂಕರ್ ಮೂಲಕ ನೀರು ಹರಿಸುತ್ತಾ ಜೋಪಾನ ಮಾಡಿದ್ದಾರೆ, ವಿಕಲಚೇತರರಾಗಿದ್ದರು ಕೂಡ ಅಪ್ಪು ಗೆ ಮನಪೂರ್ವಕವಾಗಿ ಅರ್ಪಿಸುವ ಸಲುವಾಗಿ ಬರಿಗಾಲಿನಲ್ಲಿ ಉಳುಮೆ ಹಾಗೂ ಯಾವುದೇ ರೀತಿಯ ರಾಸಾಯನಿಕ ಬಳಸದೆ ಭಕ್ತಿ ಮೆರೆದಿದ್ದಾರೆ.
ಈ ರೈತ ಕಳೆದ ವರ್ಷವೂ ಕೂಡ ಮೊದಲನೇ ಪುಣ್ಯ ಸ್ಮರಣೆಗೆ ಈ ರೀತಿ ಕಾಣಿಕೆ ನೀಡಬೇಕು ಎಂದು ಪ್ರಯತ್ನ ಮಾಡಿದ್ದರಂತೆ ಆದರೆ ಅಪಾರ ಮಳೆ ಬಿದ್ದ ಕಾರಣ ಆ ಸಮಯದಲ್ಲಿ ಅದು ಸರಿಯಾಗಿ ಬರದೆ ಹಾಳಾಗಿತ್ತಂತೆ. ಇದುವರೆಗೂ ಈ ರೀತಿ ಭಾವಚಿತ್ರ ಮೂಡಿಸುವುದಕ್ಕಾಗಿ ಮೂರು ಲಕ್ಷಕ್ಕಿಂತ ಹೆಚ್ಚು ಹಣ ಖರ್ಚಾಗಿದೆ.
ಈ ಬಗ್ಗೆ ಮಾತನಾಡುವ ರೈತ ಸತ್ಯನಾರಾಯಣ ಅಪ್ಪು ಸದಾಕಾಲ ನನ್ನ ಜಮೀನಿನಲ್ಲಿ ಬೆಳೆಯಾಗಿ ನಮ್ಮೊಡನೆ ಜೀವಂತವಾಗಿದ್ದಾರೆ, ಅವರು ಎಲ್ಲೂ ಹೋಗಿಲ್ಲ ಎನ್ನುವ ಭಾವ ಸಾಕು ಅದೇ ನನಗೆ ಸಂತೋಷ. ಚಿಕ್ಕ ವಯಸ್ಸಿಂದಲೂ ಕೂಡ ನಾನು ಅಪ್ಪು ಅಭಿಮಾನಿ ಅದಕ್ಕಾಗಿ ಈ ರೀತಿ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಸಹ ಇವರು ಭೇಟಿಯಾಗಿ ತಾವು ಮಾಡಿದ ಪ್ರಯತ್ನದ ಬಗ್ಗೆ ಹೇಳಿಕೊಂಡಿದ್ದಾರೆ. ಅಶ್ವಿನಿ ಹಾಗೂ ಕುಟುಂಬ ರೈತನಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಈ ಸಂಬಂಧಿತ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದ್ದು ಅಪಾರ ಅಪ್ಪು ಅಭಿಮಾನಿಗಳು ರೈತನಿಗೆ ಅಭಿನಂದಿಸುತ್ತಿದ್ದಾರೆ.