ಪ್ರತಿಯೊಬ್ಬರೂ ಕೂಡ ಅವರ ಜಮೀನಿಗೆ ದಾಖಲೆಯಾಗಿ ಪಹಣಿ ಪತ್ರವನ್ನು ಹೊಂದಿರುತ್ತಾರೆ. ಜಮೀನಿಗೆ ಸಂಬಂಧಿಸಿದ ಹಾಗೆ ರೈತನಿಗೆ ಸರ್ಕಾರದಿಂದ ಸಿಗುವ ಯಾವುದೇ ಯೋಜನೆಯ ಪ್ರಯೋಜನ ಅಥವಾ ಅನುದಾನ ಪಡೆಯಬೇಕು ಎಂದರೆ ಪಹಣಿ (RTC) ಪತ್ರವನ್ನು ಪ್ರಮುಖ ದಾಖಲೆಯಾಗಿ ನೀಡಲೇಬೇಕು.
ಪಹಣಿ ಪತ್ರದಲ್ಲಿ ಭೂಮಿ ಯಾರ ಹೆಸರಿನಲ್ಲಿ ಇದೆ, ಎಷ್ಟು ಎಕರೆ ಇದೆ, ಯಾವ ರೀತಿಯ ಕೃಷಿಗೆ ಒಳಪಟ್ಟಿದೆ ಇನ್ನಿತ್ಯಾದಿ ಮಾಹಿತಿಗಳು ಸಿಗುತ್ತವೆ, ಆದರೆ ಜಮೀನಿನ ನಕ್ಷೆ ಇರುವುದಿಲ್ಲ. ಪಹಣಿಯೊಂದಿಗೆ ಜಮೀನಿನ ನಕ್ಷೆ ಜೋಡಿಸಿದರೆ ರೈತರಿಗೆ ಬಹಳಷ್ಟು ಅನುಕೂಲತೆ ಆಗುತ್ತದೆ ಎನ್ನುವುದು ರೈತ ಪರ ವಾದ. ಈಗ ಶೀಘ್ರದಲ್ಲಿ ಅಂದರೆ ಈ ವರ್ಷದ ಅಂತ್ಯದೊಳಗೆ ರೈತರಿಗೆ ಅಂತಹ ಅನುಕೂಲತೆ ಸಿಗಲಿದೆ.
ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷದಿಂದ ಇದರ ಸಂಬಂಧಿತವಾಗಿ ಕೆಲಸ ಮಾಡುತ್ತಿದ್ದು, ಸರ್ವೆ ಆಫ್ ಇಂಡಿಯಾ (Servey of India) ರಾಜ್ಯದ ಒಟ್ಟು 49 ಕಡೆಗಳಲ್ಲಿ ಕಂಟಿನ್ಯೂಯಸ್ ಆಪರೇಟಿಂಗ್ ರೆಫರೆನ್ಸ್ ಸಿಸ್ಟಂ (CORS) ಬಿಂದುಗಳನ್ನು ಸ್ಥಾಪಿಸಿ, ಈ ಮಾರ್ಕ್ ಮಾಡಿರುವ ಬಿಂದುವಿನ ಆಧಾರದಲ್ಲಿ ಅಂದಾಜು 100 ಮೀಟರ್ ಎತ್ತರದಲ್ಲಿ ಡ್ರೋನ್ ಹಾರಿಸಿ ಅದರ ಸಹಾಯದಿಂದ ಚಿತ್ರ ತೆಗೆದು.
ಆ ಮೂಲಕ ಆಥೋ ರೆಕ್ಟಿಫೈಡ್ ಇಮೇಜ್ ಆಗಿ ಪರಿವರ್ತಿಸಿ ತದ ನಂತರ ರೋವರ್ ಉಪಕರಣಗಳನ್ನು ಬಳಕೆ ಮಾಡಿಕೊಂಡು ಜಮೀನಿನ ಬಿಂದುಗಳನ್ನು ಅಳತೆ ಮಾಡಿ, ಕ್ಯೂ-ಜಿಐಎಸ್ (Q-GIS) ತಂತ್ರಾಂಶ ಬಳಸಿ ನಕ್ಷೆಯನ್ನು ಒಳಗೊಂಡ ಪಹಣಿಯನ್ನು ಭೂ ಮಾಲೀಕರಿಗೆ ನೀಡಲು ಶ್ರಮಿಸುತ್ತಿದೆ.
ಕಂದಾಯ ಇಲಾಖೆಯಲ್ಲಿ (Revenue department) ಹೊಸತನ ತರಲು ಮುಂದಾಗಿರುವ ಸರ್ಕಾರ, ಮರು ಭೂಮಾಪನ ಮಾಡುವ ಮೂಲಕ ಭೂಮಾಲೀಕರಿಗೆ ಹಲವು ಅನುಕೂಲಗಳನ್ನು ಕಲ್ಪಿಸಲಿದೆ. ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯಲ್ಲಿ ಇದಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಿದೆ.ಜಮೀನಿನ ನಕ್ಷೆ ಒಳಗೊಂಡ ಪಹಣಿ/ಆರ್ಟಿಸಿಯನ್ನು ರೈತರಿಗೆ ನೀಡುವುದು.
ಅಂದಾಜು 150 ವರ್ಷಗಳ ಹಳೇ ದಾಖಲೆಗಳನ್ನು ಗಣಕೀಕರಣಗೊಳಿಸುವುದೂ ಸೇರಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲು ಮುಂದಾಗಿರುವ ಸರ್ಕಾರ, ಇದಕ್ಕಾಗಿ ಮರು ಭೂಮಾಪನ ಕಾರ್ಯ ಕೈಗೊಂಡಿದೆ. ಇದರ ಸಲುವಾಗಿ ಟೀಮ್ ಕನಕಪುರದಲ್ಲಿ (Kanakapura) ಕೂಡ ತನ್ನ ಕಾರ್ಯಾಚರಣೆ ಶುರು ಮಾಡಿದೆ.
ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ 35 ಕಂದಾಯ ಗ್ರಾಮಗಳನ್ನು ಪ್ರಾಯೋಗಿಕ ಭೂ ಮರುಮಾಪನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೇಂದ್ರದ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಒಟ್ಟು 5,706 ಸರ್ವೆ ನಂಬರ್ಗಳು, 23,366 RTCಗಳು, 31,071 ಹಿಡುವಳಿದಾರರು ಹಾಗೂ ಮಂಜೂರಾದರೂ ಇನ್ನೂ ಪೋಡಿ ಆಗದ 741 ಫಲಾನುಭವಿಗಳು ಇದ್ದಾರೆ.
ಈ ರೀತಿ ಪಹಣಿಯ ಜೊತೆ ನಕ್ಷೆಯನ್ನು ಸೇರಿಸುವುದರಿಂದ ಆಗುವ ಪ್ರಯೋಜನಗಳೇನೆಂದರೆ ಜಂಟಿ ಅಥವಾ ಬಹು ಮಾಲೀಕತ್ವದ ಜಮೀನುಗಳ ಸರ್ವೆ ಮಾಡಲು ಸರಾಗವಾಗುತ್ತದೆ ಏಕ ಮಾಲೀಕತ್ವದ ಪ್ರತ್ಯೇಕ ಪಹಣಿಪತ್ರ ನೀಡಬಹುದು. ಪೋಡಿ ವಿಳಂಬ ತಪ್ಪಿಸಿ ಮಂಜೂರು ಭೂಮಿಯ ಹಕ್ಕು ದಾಖಲೆ ಒದಗಿಸಬಹುದು, RTC ಹಕ್ಕುದಾರರು ಮರಣ ಹೊಂದಿದ್ದರೆ ವಾರಸುದಾರರಿಗೆ RTC ಒದಗಿಸಬಹುದು.
ಈಗ ಮತ್ತೊಮ್ಮೆ ಭೂಮಾಪನ ಮಾಡುತ್ತಿರುವುದರಿಂದ ಇದೆಲ್ಲವೂ ಕಂಪ್ಯೂಟರ್ನಲ್ಲಿ ಸೇವ್ ಆಗುತ್ತದೆ. ನಕ್ಷೆಸಹಿತ ಪಹಣಿ ವಿತರಣೆಯಿಂದ ಒತ್ತುವರಿ ತೆರೆಗೆ ಅನುಕೂಲವಾಗುತ್ತದೆ. ದಿಶಾಂಕ್ ಆಪ್ ಮೂಲಕ ಜಮೀನಿನ ನಿಖರವಾದ ಗಡಿಯನ್ನು ನೋಡಬಹುದು, ದೋಷಮುಕ್ತ ಸರ್ವೆ ದಾಖಲೆಗಳನ್ನು ಜನರೇಟ್ ಮಾಡಲು ಅವಕಾಶವಾಗುತ್ತದೆ.