ಡಾಕ್ಟರ್ ವಿಷ್ಣುವರ್ಧನ್ ಅವರದ್ದು ಬಹುಮುಖ ಪ್ರತಿಭೆ ಎಂತಹದೇ ಪಾತ್ರವಿರಲಿ, ಪಾತ್ರದ ಒಳಗೆ ತಲ್ಲೀನರಾಗಿ ನೈಜತೆಯ ರಂಗು ನೀಡುವ ಅಭಿನಯ; ಸುಮಧುರವಾದ ಗಂಭೀರ ಕಂಠ; ಕಥೆಯ ಮೂಲವನ್ನು ಕೇಂದ್ರೀಕರಿಸಿ ಸುತ್ತಲೂ ಅನೇಕ ಸನ್ನಿವೇಶಗಳನ್ನು ಹೆಣೆದು ಬೆಸೆಯುವ ಬರವಣಿಗೆ; ಇವಿಷ್ಟೇ ಸಾಕು ಅವರ ಪಾಂಡಿತ್ಯವನ್ನು ಮೆಚ್ಚಿ ಒಪ್ಪಿಕೊಳ್ಳಲು. ಅವರು ಹಾಡಿದ ಹಾಡುಗಳಲ್ಲಿ ಹೇಗೆ ಶಬ್ದಗಳ ಸ್ಪಷ್ಟತೆಯು ಧ್ವನಿಯಲ್ಲಿ ವ್ಯಕ್ತವಾಗುತ್ತಿತ್ತೋ ಹಾಗೆ ಅವರು ಬರೆದ ಕಥೆಗಳಲ್ಲಿ ಸಮಯ ಪ್ರಜ್ಞೆ, ಹಾಸ್ಯ ಪ್ರಜ್ಞೆ ಜನತೆಗೆ ನೀಡಬೇಕಾದ ಸಂದೇಶವು ಎದ್ದು ಕಾಣುತ್ತಿತ್ತು.
ಡಾಕ್ಟರ್ ವಿಷ್ಣುವರ್ಧನ್ ಅವರು ಚಿತ್ರಗಳಲ್ಲಿ ಅಭಿನಯಿಸುವುದರೊಂದಿಗೆ ಗಾಯನದಲ್ಲಿ, ಬರವಣಿಗೆಯಲ್ಲಿಯೂ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ. ಚಿತ್ರರಂಗದ ಬೇರೆ ಬೇರೆ ಕೆಲಸ ಕಾರ್ಯಗಳನ್ನು ನಿರ್ವಹಿಸಿದ ಇವರು ಜನ ಮೆಚ್ಚುವ ನಾಯಕರು. ಕನ್ನಡ ಚಿತ್ರರಂಗದಲ್ಲಿ ಪ್ರಧಾನವಾಗಿ ಕೆಲಸ ಮಾಡಿದರು ಜೊತೆಯಲ್ಲಿ ತಮಿಳು, ತೆಲುಗು, ಹಿಂದಿ, ಮಲಿಯಾಳಂ ಭಾಷೆಯ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ ಸಮೃದ್ಧವಾದ ಕಲಾ ಜೀವನವನ್ನು ಹೊಂದಿದ್ದಾರೆ. 220ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಇವರದ್ದು.
ಕನ್ನಡ ಚಿತ್ರರಂಗದ ಆಂಗ್ರಿ ಯಂಗ್ ಮ್ಯಾನ್ ಎಂದೇ ಕರೆಸಿಕೊಳ್ಳುವ ವಿಷ್ಣುವರ್ಧನ್ ಅವರು ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದಲ್ಲಿ ಅಭಿನಯಿಸಿದ ಬಳಿಕ ಸ್ಟಾರ್ ಪಟ್ಟವನ್ನು ಪಡೆದರು. 2002ರಲ್ಲಿ ವಿಷ್ಣುವರ್ಧನ್ ಅವರ ಚಿತ್ರರಂಗದ ಕೊಡುಗೆಯನ್ನು ಶ್ಲಾಘಿಸಿ, ಜೀವಮಾನ ಸಾಧನೆ ದಕ್ಷಿಣ ಭಾರತದ ಫಿಲಂ ಫೇರ್ ಅವಾರ್ಡ್ ಅನ್ನು ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಬನಶಂಕರಿ ದೇವಸ್ಥಾನದಿಂದ ಕೆಂಗೇರಿಯವರೆಗೆ ಅಂದರೆ 14.5 ಕಿಲೋಮೀಟರ್ ಉದ್ದದ ರಸ್ತೆಗೆ ಅವರ ಹೆಸರನ್ನು ಇಟ್ಟು ಗೌರವಿಸಲಾಗಿದೆ.
ಡಾಕ್ಟರ್ ವಿಷ್ಣುವರ್ಧನ್ ಅವರು 1995ರ ಮುತ್ತಮ್ಮ ಚಿತ್ರ ಹಾಗೂ 1998ರ ಕೌರವ ಚಿತ್ರ ಸೇರಿದಂತೆ ಅನೇಕ ಚಿತ್ರಗಳಿಗೆ ಬರಹಗಾರರಾಗಿದ್ದರು. ಹಾಸ್ಯದ ಘಟನಾವಳಿಗಳನ್ನು ಸೇರಿಸುತ್ತಾ ಮೂಲ ಕಥೆಯನ್ನು ವಿವರಿಸುವ ಅಪರೂಪದ ಬರವಣಿಗೆಯ ಶೈಲಿ ವಿಷ್ಣುವರ್ಧನ್ ಅವರದಾಗಿತ್ತು. ಅವರ ಬರವಣಿಗೆಯ ಸಾಮರ್ಥ್ಯವನ್ನು ಮೆಚ್ಚದವರೇ ಇರಲಿಲ್ಲ.
ವಿಷ್ಣುವರ್ಧನ್ ಅವರು ಹಿರಿಯ ಕಲಾವಿದರಾದ ಅನಂತನಾಗ್ ಅವರಿಗಾಗಿ ಕಥೆಯೊಂದನ್ನು ಬರೆದು, ಅದಕ್ಕೆ ‘ಗಣೇಶ್ ಐ ಲವ್ ಯು’ ಎಂಬ ಹೆಸರಿಡುತ್ತಾರೆ. ಇದು 1997ರ ಕನ್ನಡ ಚಲನಚಿತ್ರ. ಇದನ್ನು ಪಣಿ ರಾಮಚಂದ್ರ ಅವರು ನಿರ್ದೇಶಸಿದ್ದಾರೆ. ಇವರ ನೆಚ್ಚಿನ ಬೆಳ್ಳಿ ಪರದೆಯ ಶೀರ್ಷಿಕೆ ಎಂದರೆ ಗಣೇಶ. ಅನಂತ್ ನಾಗ್ ಅವರು ಚಿತ್ರದ ನಾಮದಂತೆ ಪಾತ್ರವನ್ನು ಪುನರಾವರ್ತಿಸಿದರು. ಅಂದರೆ ಗಣೇಶನ ಪಾತ್ರದಲ್ಲಿ ಅನಂತನಾಗ್ ಅವರು ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಕಥೆಯು ವಿಶಿಷ್ಟವಾಗಿದ್ದರು ಕೂಡ ಅಷ್ಟೊಂದು ಲಾಭವನ್ನು ಗಳಿಸಲಿಲ್ಲವಂತೆ. ಗಣೇಶ ಸರಣಿಯಲ್ಲಿ ವೀಕ್ಷಕರು ಅದಾಗಲೇ ಆಸಕ್ತಿಯನ್ನು ಕಳೆದುಕೊಂಡಿರುವುದೇ ಗಣೇಶ ಐ ಲವ್ ಯು ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡದಿರಲು ಕಾರಣವೆಂಬುದು ಹಲವು ವಿಮರ್ಶಕರ ಅಭಿಪ್ರಾಯ.
ವಿಷ್ಣುವರ್ಧನ್ ಅವರು ತಾವೇ ಬರೆದ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿಲ್ಲ. ಹೊರತಾಗಿ ಚಿತ್ರದ ಆರಂಭದಲ್ಲಿ ಒಮ್ಮೆ ಕಾಣಿಸಿಕೊಂಡಿದ್ದಾರೆ ಅಷ್ಟೇ. ಒಟ್ಟಿನಲ್ಲಿ ಹೇಳುವುದಾದರೆ ಈ ಚಿತ್ರವು ವಿಷ್ಣುವರ್ಧನ್ ಅವರ ಆಕರ್ಷಣೀಯ ರೀತಿಯಲ್ಲಿ ಕಥೆಗಳನ್ನು ರಚಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಚಿತ್ರರಂಗದಲ್ಲಿ ನಟಿಸುವುದರ ಜೊತೆ ಬರಹದಲ್ಲೂ ಕೌಶಲ್ಯಗಳನ್ನು ಹೊಂದಿರುವ ಬಗ್ಗೆ ಸ್ಪಷ್ಟೀಕರಿಸುತ್ತದೆ.
ಕಲಾವಿದರಾಗಿ ವಿಷ್ಣುವರ್ಧನ್ ಅವರು ಚಿತ್ರರಂಗದ ಮೇಲೆ ಹೊಂದಿದ್ದ ಪ್ರೀತಿಯನ್ನು ತೋರಿಸುತ್ತದೆ. ಅಷ್ಟೇ ಅಲ್ಲದೆ ಚಿತ್ರರಂಗಕ್ಕಾಗಿ ಅವರು ಸಲ್ಲಿಸಿದ ಸೇವೆಯನ್ನು ನೆನಪಿನಲ್ಲಿ ಇರಿಸಿಕೊಳ್ಳುವಲ್ಲಿ ಸಹಾಯವಾಗಿದೆ.. ತಾವೊಬ್ಬ ನಟರಾಗಿ ಇನ್ನೊಬ್ಬ ನಟನ ಚಿತ್ರಕ್ಕೆ ಬರಹಗಾರನಾಗಿ ಕೊಡುಗೆ ನೀಡಿರುವುದು ಅವರ ಸರಳ ವ್ಯಕ್ತಿತ್ವಕ್ಕೆ ಉದಾಹರಣೆಯಾಗಿದೆ.