ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಾರ್ಚ್ 17 ಬಂತಂದರೆ ಅಪ್ಪುವಿನ ಅಭಿಮಾನಿಗಳು ಸಂಭ್ರಮ ಸಡಗರದಿಂದ ಕೂಡಿರುತ್ತಿದ್ದರು. ಯಾಕೆಂದರೆ ಅದು ಅಪ್ಪುವಿನ birthday. ಪುನೀತ್ ರಾಜಕುಮಾರ್ ಅವರು ಇಹಲೋಕ ತ್ಯಜಿಸಿ ವರ್ಷವೇ ಉರುಳಿದೆ. ಇವರ ಅಕಾಲಿಕ ಮರಣದಿಂದ ಪುಟ್ಟ ಮಕ್ಕಳು, ಮುದುಕರು ಸೇರಿದಂತೆ ಸಾಮಾನ್ಯ ಜನರಿಂದ ಹಿಡಿದು ಸೆಲಬ್ರಿಟಿಗಳವರೆಗೂ ನೋವು ಅನುಭವಿಸಿದವರೇ. ಆದರೆ ಅವರ ನೆನಪುಗಳು ಎಲ್ಲರಲ್ಲಿಯೂ ಮಾಸದೆ ಉಳಿದಿದೆ.
ಅಭಿಮಾನಿಗಳು ಪುನೀತ್ ಅವರು ಬದುಕಿದ್ದಾರೆ ಎಂಬ ಯೋಚನೆಯೊಂದಿಗೆ ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ. ಇಂದಿಗೂ ಸಹ ಸಭೆ ಸಮಾರಂಭಗಳಲ್ಲಿ ಒಮ್ಮೆಯಾದರೂ ಅಪ್ಪುವಿನ ನೆನಪು ಮೆಲುಕು ಹಾಕದೆ ಇರಲಾರರು. ಪ್ರತಿಯೊಬ್ಬರು ಅವರನ್ನು ನೆನೆದು ಕಣ್ಣೀರಿಡುತ್ತಾರೆ. ‘ಜೊತೆಗಿರದ ಜೀವ ಎಂದಿಗೂ ಜೀವಂತ’ ಎಂಬ ಅವರ ಚಿತ್ರದ ಸಾಲುಗಳೇ ಪುನೀತ್ ಅವರ ಭಾವಚಿತ್ರದೊಂದಿಗೆ ಕರ್ನಾಟಕದ ಗಲ್ಲಿ ಗಲ್ಲಿಯಲ್ಲಿಯೂ ಕಾಣಿಸುತ್ತದೆ.
ದೈಹಿಕವಾಗಿ ಅಪ್ಪುವಿಲ್ಲದೆ ಆಚರಿಸುವ ಎರಡನೇ ಹುಟ್ಟಿದ ಹಬ್ಬವಿದು. ಅಪ್ಪು ನಮ್ಮೊಂದಿಗೆ ಅಂದರೆ ನಮ್ಮ ಮನದೊಳಗೆ ಸದಾಕಾಲ ಉಳಿದಿದ್ದಾರೆ ಎಂಬ ನೆನಪುಗಳೊಂದಿಗೆ ಅಭಿಮಾನಿಗಳು ಅವರ ಹುಟ್ಟಿದ ಹಬ್ಬವನ್ನು ಆಚರಿಸುತ್ತಿದ್ದಾರೆ. ನಿನ್ನೆ ಮಧ್ಯ ರಾತ್ರಿಯಿಂದಲೇ ಪುನೀತ್ ಅವರ ಸ.ಮಾ.ಧಿಯ ಬಳಿ ಅಭಿಮಾನಿಗಳು ಸೇರಿದ್ದು, ಹೂವು ಗಂಧ ಅರ್ಪಿಸಿ ಪೂಜೆ ಸಲ್ಲಿಸಿದ್ದಾರೆ. ಕಂಠೀರವ ಸ್ಟುಡಿಯೋ ಕೂಡ ಜನರಿಂದ ತುಂಬಿದೆ. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರು ಪುನೀತ್ ಅವರ ನೆನೆದು, ಭಾವುಕ ಪತ್ರ ಒಂದನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
‘ಪುನೀತ್ ಅವರು ದೈಹಿಕವಾಗಿ ನಮ್ಮೊಂದಿಗೆ ಇರಬೇಕಿತ್ತು’ ಎಂಬುದು ನಮಗೆಲ್ಲರಿಗೂ ಅನಿಸುತ್ತದೆ. ಹಾಗೆಯೆ ಅವರೊಂದಿಗೆ ದಿನ ಕಳೆಯುತ್ತಿದ್ದ ಕುಟುಂಬಸ್ಥರು ಹಾಗೂ ಆಪ್ತರಿಗೆ ಇನ್ನೂ ಹೆಚ್ಚಿನದಾಗಿ ಅವರ ನೆನಪು ಕಾಡುತ್ತದೆ. ಅಣ್ಣನಾಗಿ ಶಿವರಾಜಕುಮಾರ್ ತಮ್ಮನನ್ನು ನೆನೆದು ದುಃಖ ಪಡುತ್ತಾರೆ. ಹುಟ್ಟು ಹಬ್ಬದ ದಿನ, ಅಪ್ಪುವಿಗಾಗಿ ಪತ್ರವನ್ನು ಬರೆದಿದ್ದಾರೆ.
“ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು. ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗೋದನ್ನ ಆವಾಗ್ಲೇ ಹೇಳ್ತಾ ಇತ್ತು. ನೀನು ನಕ್ಕರೆ ಎಲ್ರು ನಗ್ತಾ ಇದ್ರು. ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ತಾ ಇದ್ರು, ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು ಹೆಮ್ಮರವಾಗಿ, ಕೋಟ್ಯಾಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ”
“ನಿನ್ನನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವುದೇ ಆಗಿದ್ರೂ ನಿನ್ನ ಹೆಸರಿನಲ್ಲಿ ಪಟಾಕಿಗಳನ್ನು ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಾ ಇದೀನಿ, ನೀನು ಹುಟ್ಟಿದ್ದೇ ಒಂದು ಉತ್ಸವ. ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ. ನಿನ್ನ ನೆನಪುಗಳು ಎಂದಿಗೂ ಅಮರ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು” ಎಂದು ಸುಂದರವಾದ ಸಾಲುಗಳಿಂದ ಶಿವಣ್ಣ ಅವರು ಅಪ್ಪುವಿಗಾಗಿ ಪತ್ರವನ್ನು ಬರೆದಿದ್ದು ಎಲ್ಲರ ಮನಸ್ಸು ಮುಟ್ಟಿದೆ. ಓದುವಾಗ ಅಭಿಮಾನಿಗಳ ಕಣ್ಣಲ್ಲಿ ನೀರು ತುಂಬಿದೆ.
ಪುನೀತ್ ಅವರ ಹುಟ್ಟು ಹಬ್ಬದ ಅಂಗವಾಗಿ ಕರ್ನಾಟಕದ ಅನೇಕ ಭಾಗಗಳಲ್ಲಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ಅಪ್ಪುವಿನ ಹೆಸರಿನಲ್ಲಿ ಚಿತ್ರೋತ್ಸವ ನಡೆದಿವೆ. ರಾಜ್ಯದಲ್ಲಿ ಕಬ್ಜ ಚಿತ್ರವು ಪ್ರದರ್ಶನವನ್ನು ಪ್ರಾರಂಭಿಸಿದ್ದು, ಚಿತ್ರಮಂದಿರಗಳಲ್ಲಿ ರಿಯಲ್ ಸ್ಟಾರ್ ಉಪ್ಪಿಯವರು ಪ್ರೆಸ್ ಮೀಟ್ ನಲ್ಲಿ ಹೇಳಿದ ಹಾಗೆ, ಅಪ್ಪು ಅವರ ದೊಡ್ಡದಾದ ಕಟೌಟ್ಗಳನ್ನು ಇರಿಸಲಾಗಿದೆ. ‘ಪುನೀತ್ ಅವರು ನಮ್ಮೊಂದಿಗೆ ಇದ್ದು ಹುಟ್ಟುಹಬ್ಬವನ್ನು ಆಚರಿಸಿದರೆ ಇನ್ನೂ ಚೆನ್ನಾಗಿರುತ್ತಿತ್ತು’ ಎನ್ನುತ್ತಾ ಅಭಿಮಾನಿಗಳು ಭಾವುಕರಾಗಿದ್ದಾರಂತೆ.