ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power star Puneeth Rajkumar) ಕರ್ನಾಟಕದಲ್ಲಿ ದೇವಮಾನವ ಎಂದು ಕರೆಸಿಕೊಳ್ಳುತ್ತಿದ್ದಾರೆ. ಪುನೀತ್ ರಾಜಕುಮಾರ್(Appu) ಅವರ ತಂದೆ ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು ಅಭಿಮಾನಿಗಳೇ ದೇವರು ಎಂದಿದ್ದರು. ಇದೀಗ ಅಭಿಮಾನಿಗಳು ಪುನೀತ್ ಅವರನ್ನು ಅಭಿಮಾನಿಗಳ ದೇವರು ಎಂದು ಕರೆಯುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಅಪ್ಪು ಅವರು ಮಾಡಿರುವ ಸಮಾಜ ಸೇವೆ ಅಪ್ಪು ಅವರು ಕೇವಲ ಒಬ್ಬ ಸ್ಟಾರ್ ನಟ ಆಗಿದ್ದರೆ ಅವರಿಗೆ ಇಷ್ಟು ಪ್ರೀತಿ ವಿಶ್ವಾಸ ಇಂತಹ ದೊಡ್ಡ ಸ್ಥಾನ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಅವರು ಅವರನ್ನು ಸಮಾಜಕ್ಕಾಗಿ ಮುಡಿಪಿಟ್ಟ ಪರಿಗೆ ಇಂದು ಇಡೀ ಕರ್ನಾಟಕ ಮನೆಮನೆಯಲ್ಲೂ ಅವರ ಫೋಟೋ ಇಟ್ಟು ಪೂಜಿಸುತ್ತಿದೆ.
ಅಪ್ಪು ಅವರನ್ನು ಈಗ ಪ್ರತಿಯೊಬ್ಬರೂ ಕೂಡ ತಮ್ಮ ಮನೆಯ ಮಗನಂತೆ ಕಾಣುತ್ತಿದ್ದಾರೆ. ಇದನ್ನೆಲ್ಲ ನೋಡಿ ಕಣ್ತುಂಬಿಕೊಳ್ಳಲು ಅವರೇ ನಮ್ಮ ಜೊತೆ ಇಲ್ಲ ಎನ್ನುವುದೇ ಬಹಳ ಬೇಸರದ ವಿಷಯ. ಅವರು ನಮ್ಮನ್ನೆಲ್ಲ ಅಗಲಿ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಕಳೆಯುತ್ತಿದ್ದರೂ ಕೂಡ ಅಂದು ಶ್ರದ್ದಾಂಜಲಿ ಸಲ್ಲಿಸಲು ಹಾಕಿದ್ದ ಪೋಸ್ಟರ್ ಅನ್ನು ಇಂದಿಗೂ ಕೆಳಗೆ ಇಳಿಸಲು ಮನಸಾಗುತ್ತಿಲ್ಲ. ಆ ನಗುಮುಖದ ಒಡೆಯನ, ಕರುನಾಡ ರಾಜಕುಮಾರನ ಫೋಟೋ ನೋಡುತ್ತಿದ್ದರೆ ನಿಜವಾಗಿಯೂ ಅಪ್ಪು ಇದ್ದಾರೆ ವಿದೇಶಕ್ಕೆ ಎಲ್ಲೊ ಶೂಟಿಂಗ್ ಹೋಗಿರಬೇಕು ಎನಿಸಿಬಿಡುತ್ತದೆ.
ಅಷ್ಟು ಆತ್ಮೀಯರಂತೆ ಕಾಣುವ ಅಪ್ಪು ಅವರ ಪೋಸ್ಟರ್ಗಳು ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಕೂಡ ಕಾಣಸಿಗುತ್ತವೆ. ನಾವು ಎಲ್ಲೇ ಪ್ರಯಾಣ ಮಾಡುತ್ತಿದ್ದರು ಕೂಡ ಅಪ್ಪು ಭಾವಚಿತ್ರಗಳನ್ನು ಪ್ರತಿ ರಸ್ತೆಯ ಎರಡು ಬದಿಗಳಲ್ಲೂ ನೋಡಬಹುದು. ಇಂದು ಎಷ್ಟೋ ಜನ ತಮ್ಮ ಊರಿನ ಸರ್ಕಲ್ಗಳಿಗೆ ಏರಿಯಾದ ರಸ್ತೆಗಳಿಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಟ್ಟಿದ್ದಾರೆ ಎಷ್ಟೋ ಕಡೆ ಅವರ ಪ್ರತಿಮೆಗಳನ್ನು ಮಾಡಿ ಗೌರವ ಕೊಡುತ್ತಿದ್ದಾರೆ. ಇನ್ನು ಮುಂದುವರೆದು ದೇವರ ಫೋಟೋ ಜೊತೆ ಅಪ್ಪು ಫೋಟೋ ಇಡುತ್ತಿರುವವರ ಸಂಖ್ಯೆಗೇನು ಕಡಿಮೆ ಇಲ್ಲ. ಕರ್ನಾಟಕ ಸರ್ಕಾರವೇ ತನ್ನ ಪಠ್ಯ ಪುಸ್ತಕದಲ್ಲಿ ಮೂರನೇ ತರಗತಿ ಪಾಠಕ್ಕೆ ಪುನೀತ್ ರಾಜಕುಮಾರ್ ಅವರ ಅಧ್ಯಾಯವನ್ನು ಸೇರಿಸಲು ಅನುಮತಿ ನೀಡಿದೆ.
ಯಾವ ಊರ ದೇವರ ಮೆರವಣಿಗೆ ಹೊರಟರು ಕೂಡ ಅಲ್ಲಿ ಅಪ್ಪುವಿನ ಪಟವೂ ಇರುತ್ತದೆ ಯಾವುದೇ ಜಾತ್ರೆ ರಥೋತ್ಸವ ಆದರೂ ಕೂಡ ಅಲ್ಲಿಯೂ ಅಪ್ಪುವಿಗೆ ಒಂದು ಸ್ಥಾನ ಇದ್ದೇ ಇದೆ ಮತ್ತು ಇತ್ತೀಚಿಗೆ ಉಡುಗೊರೆ ಕೊಡುವವರೆಲ್ಲಾ ಅಪ್ಪು ಫೋಟೋ ಅನ್ನೇ ಉಡುಗೊರೆ ಆಗಿ ಕೊಡುತ್ತಿದ್ದಾರೆ. ಹೀಗೆ ಅಪ್ಪು ಅವರನ್ನು ಕರ್ನಾಟಕದ ಜನತೆ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಪದಗಳಲ್ಲಿ ಹೇಳುವುದು ಬಹಳ ಕಷ್ಟ. ಇಂತಹ ಮಾತಿಗೆ ನಿಲುಕದ ನಕ್ಷತ್ರದ ಮೇಲೆ ಕರ್ನಾಟಕ ಜನತೆ ಇಟ್ಟಿರುವ ಈ ಪ್ರೀತಿಗೆ ಮತ್ತೊಂದು ಘಟನೆ ಸಾಕ್ಷಿ ಆಗಿದೆ. ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ದೇಶದ ನಾನಾ ಕಡೆಯಿಂದ ಶಬರಿಮಲೆಗೆ ಮಾಲಧಾರಿಗಳು ಯಾತ್ರೆ ಹೋಗುತ್ತಾರೆ.
ಅದರಲ್ಲೂ ದಕ್ಷಿಣ ಭಾರತೀಯರು ಈ ಬಗ್ಗೆ ಬಹಳ ಭಕ್ತಿ ಹೊಂದಿದ್ದಾರೆ. ನಮ್ಮಲ್ಲಿ ಸಾಮಾನ್ಯರಿಂದ ಹಿಡಿದು ಸ್ಟಾರ್ಗಳವರೆಗೂ ಕೂಡ ಮಾಲೆ ಹಾಕಿಕೊಂಡು ಕಟ್ಟುನಿಟ್ಟಾಗಿ ನಿಯಮ ಪಾಲಿಸಿಕೊಂಡು ಹೋಗಿ ಸೇವೆ ಮಾಡಿ ಬರುತ್ತಾರೆ. ಸೂಪರ್ ಸ್ಟಾರ್ ರಜನಿಕಾಂತ್ ಡಾಕ್ಟರ್ ರಾಜಕುಮಾರ್ ಶಿವಣ್ಣ ಪುನೀತ್ ರಾಜಕುಮಾರ್ ದರ್ಶನ್ ಹೀಗೆ ಎಲ್ಲರೂ ಸಹ ಮಾಲೆ ಹಾಕಿಕೊಂಡು ಶಬರಿಮಲೆಗೆ ಹೋಗಿ ಬಂದಿದ್ದಾರೆ. ಅಣ್ಣಾವ್ರ ಕುಟುಂಬದಲ್ಲಿ ಅಂತೂ ಒಂದು ಬಳಗವೇ ಇತ್ತು. ತಪ್ಪದೇ ಪ್ರತಿ ವರ್ಷ ಕೂಡ ಅವರೆಲ್ಲರೂ ಹೋಗಿ ಬರುತ್ತಿದ್ದರು.
ಅವರ ಗುಂಪಿನಲ್ಲಿ ಪುನೀತ್ ರಾಜಕುಮಾರ್ ಅವರು ಸಹ ಹೋಗುತ್ತಿದ್ದರು. ಪುನೀತ್ ರಾಜಕುಮಾರ್ ಅವರು ಈ ರೀತಿ ಮಾಲೆ ಹಾಕಿಕೊಂಡು ಇಡುಮುರಿಯನ್ನು ತಲೆ ಮೇಲೆ ಹೊತ್ತುಕೊಂಡಿರುವ ಫೋಟೋ ವೈರಲ್ ಆಗಿದೆ. ಇದೇ ಫೋಟೋವನ್ನು ಕರ್ನಾಟಕದಿಂದ ಈ ವರ್ಷ ಶಬರಿಮಲೆ(Shabarimale) ಯಾತ್ರೆ ಹೊರಟಿದ್ದ ಮಾಲಾಧಾರಿಗಳು ಹೊತ್ತು ಹೋಯ್ದಿದ್ದಾರೆ. ಮಾಲಾಧಾರಿಗಳು ಆ ಫೋಟೋವನ್ನು ಹಿಡಿದು ತಮ್ಮ ಜೊತೆ ಅಪ್ಪು ಅವರೇ ಇದ್ದಾರೆ ಎಂದು ಭಾವಿಸಿಕೊಂಡಿದ್ದಾರೆ. ಹೀಗಾಗಿ ಫೋಟೋವನ್ನು ಸಹ ದರ್ಶನ ಮಾಡಲು ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ.
ಆದರೆ ಇತ್ತೀಚಿಗೆ ಕೇರಳ ಸರ್ಕಾರವು ಯಾವ ವ್ಯಕ್ತಿಯ ಭಾವಚಿತ್ರವನ್ನು ಕೂಡ ದೇವಸ್ಥಾನದ ಒಳಗೆ ತರುವಂತಿಲ್ಲ ಎಂದು ನಿಯಮ ಮಾಡಿದೆ ಹಾಗಾಗಿ ದೇವಸ್ಥಾನದ ಆಡಳಿತ ಮಂಡಳಿ ಫೋಟೋ ಜೊತೆ ಬಂದಿರುವ ಅಪ್ಪು ಅಭಿಮಾನಿಗಳಿಗೆ ಒಳಗಡೆ ದರ್ಶನ ಮಾಡಲು ಅನುಮತಿ ಕೊಟ್ಟಿಲ್ಲ. ನಂತರ ಅಪ್ಪು ಅವರಿಗೆ ಇರುವ ಗಣ್ಯ ಸ್ಥಾನವನ್ನು ಅರಿತು ಈ ಬಾರಿ ಅವಕಾಶ ಮಾಡಿಕೊಟ್ಟಿದ್ದಾರೆ. ಅಪ್ಪು ಅಭಿಮಾನಿಗಳಾದ ಮಾಲಾಧಾರಿಗಳು ತಮ್ಮ ಜೊತೆ ಭಾವಚಿತ್ರವನ್ನು ಸಹ ಕೊಂಡು ದರ್ಶನ ಮಾಡಿ ಬಂದಿದ್ದಾರೆ ಆದರೆ ಇನ್ನು ಮುಂದೆ ಆ ರೀತಿ ಆಗುವುದಿಲ್ಲ ಎಂದು ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ಎಚ್ಚರ ಸಹ ನೀಡಿದೆ.