ತಮ್ಮ ಎಡಪಂಥೀಯ ಕಟ್ಟುನಿಟ್ಟಿನ ಧೋರಣೆಯಿಂದ ಸದಾ ಕಾಲ ಹಿಂದೂ ಧರ್ಮ ಹಾಗೂ ಹಿಂದೂ ಧರ್ಮ ಆಚರಣೆಗಳು ಮತ್ತು ಹಿಂದೂ ದೇವಾನು ದೇವತೆಗಳ ಬಗ್ಗೆ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಹಿಂದೂ ಪರ ಸಂಘಟನೆಗಳು ಹಾಗೂ ಬಲಪಂಥೀಯ ಸಂಘಟನೆಗಳಿಂದ ತೀವ್ರ ಮುಖಭಂಗಕ್ಕೊಳಗಾಗುವ ವಿಮರ್ಶಕ ವಿಚಾರವಾದಿ ಪ್ರೊ.ಕೆ.ಎಸ್ ಭಗವಾನ್ ರವರು ಅಕ್ಟೋಬರ್ 13ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಸಮಿತಿಯಿಂದ ಪುರಭವನದಲ್ಲಿ ಆಯೋಜಿಸಿದ್ದ ದಮ್ಮದೀಕ್ಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಮಯದಲ್ಲಿ ಸಭೆ ಉದ್ದೇಶ ಮಾತನಾಡುವಾಗ ತಮ್ಮ ಭಾಷಣದಲ್ಲಿ ಮತ್ತೊಮ್ಮೆ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ. ಶಂಕರಾಚಾರ್ಯರ ಆದಿಯಿಂದಾಗಿ ಶ್ರೀರಾಮನವರೆಗೂ ಕೂಡ ಹಿಂದೂ ದೇವತೆಗಳ ಬಗ್ಗೆ ಅವಹೇಳನ ಮಾಡಿಕೊಂಡು ಬಂದಿರುವ ಇವರು ಈ ಬಾರಿ ಒಕ್ಕಲಿಗರ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಹೊಸದೊಂದು ವಿವಾದ ಮೈ ಮೇಲೆ ಎಳೆದು ಕೊಂಡಿದ್ದಾರೆ.
ಈ ಬಾರಿ ತಮ್ಮ ಹೇಳಿಕೆಗೆ ಕುವೆಂಪು ಅವರ ಹೆಸರನ್ನು ತಳಕು ಹಾಕಿರುವ ಅವರು ಹೀಗೆಂದಿದ್ದಾರೆ. ನಾನು ಹಿಂದೂ ಧರ್ಮವನ್ನು ಯಾವಾಗಲೋ ಬಿಟ್ಟು ಬಿಟ್ಟೆ ಎಂದು ಕುವೆಂಪು ಯಾವಾಗಲೂ ಹೇಳುತ್ತಿದ್ದರು. ಆದರೆ, ಅದು ಅವರ ಶಿಷ್ಯರಿಗೆ ಅದು ಅರ್ಥವಾಗಲಿಲ್ಲ. ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದು ಹೇಳಿದ್ದರು.
ಇದು ನನ್ನ ಮಾತಲ್ಲ ಕುವೆಂಪು ಅವರದ್ದು. ಇಲ್ಲದಿದ್ದರೆ ನನಗೆ ಹೊಡೆಯಲು ಬರುತ್ತಾರೆ, ನನ್ನನ್ನು ಕೊಂದು ಹಾಕಿ ಬಿಡುತ್ತಾರೆ. ಆದರೆ, ನಿಜ ಹೇಳಿಯೇ ಸಾಯಬೇಕು ಹಾಗಾಗಿ ಹೇಳುತ್ತಿದ್ದೇನೆ ಎಂದರು. ಜನಿವಾರದಿಂದ ಜಾತಿ ಗುರುತಿಸುತ್ತಾರೆ. ಹಾಕದವನು ಒಂದು, ಹಾಕಿರೋನು ಒಂದು. ಕೈಗೆ ಕಾಲಿಗೆ ಜಾತಿ ಇಟ್ಟಿರೋದು ಹಿಂದೂ ಧರ್ಮ ಹಿಂದೂ ಧರ್ಮ ನಮ್ಮ ಧರ್ಮ ಅಲ್ಲ. ನಮ್ಮ ಧರ್ಮ ಬೌದ್ಧ ಧರ್ಮ, ಹಿಂದೂ ಧರ್ಮ ಎರಡು ಸಾವಿರ ವರ್ಷಗಳ ಹಿಂದೆ ಹೊರಗಿನಿಂದ ಇಲ್ಲಿಗೆ ಬಂದಿದ್ದು ಬುದ್ಧ ನಮ್ಮಲ್ಲಿ ಜನಿಸಿದವರು ಹಾಗಾಗಿ ಬೌದ್ಧ ಧರ್ಮ ನಮ್ಮದು.
ಜ್ಞಾನದ ಬೆಳಕು ಎನ್ನುವ ಕಾರಣಕ್ಕಾಗಿ ಬುದ್ಧನನ್ನು ಅನೇಕರು ದ್ವೇಷಿಸುತ್ತಾರೆ ಎಂದರು. ಬ್ರಾಹ್ಮಣರು ವೈದಿಕರು ಸಾವಿರಾರು ವರ್ಷದಿಂದ ಬೇರೆಯವರಿಗೆ ಸಂಸ್ಕೃತ ಕಲಿಸಲಿಲ್ಲ. ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು. ಶೂದ್ರನನ್ನು ದೇವರು ಸೃಷ್ಠಿ ಮಾಡಿರೋದೆ ಬ್ರಾಹ್ಮಣರ ಸೇವೆ ಮಾಡಲು ಎಂದು ತಿಳಿದುಕೊಂಡಿದ್ದಾರೆ.
ಶೂದ್ರರನ್ನು ಜೀತದಾಳುಗಳು ಎಂದು ಹೇಳಿರುವ ಈ ಧರ್ಮ ಬೇಕಾ? ಎಂದು ಪ್ರಶ್ನಿಸಿದರು. ಇದರ ಜೊತೆಗೆ ರಾಮರಾಜ್ಯ ಎಂದರೆ ಶ್ಯೂದರನ್ನು ಕೊಲ್ಲುವ ಆಡಳಿತ, ಹೀಗಾಗಿ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಭಗವಾನ್ ರವರು ನೀಡಿರುವ ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎನ್ನುವ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಅವರ ಈ ಹೇಳಿಕೆಯ ವಿಡಿಯೋಗಳು ಟಿ.ವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಒಕ್ಕಲಿಗರು ಇವರ ಮಾತಿನ ವಿರುದ್ಧ ಸಿಡಿದೆದ್ದಿದ್ದಾರೆ. ಅ. 14ರಂದು ಮೈಸೂರಿನಲ್ಲಿ ಜಿಲ್ಲಾ ಒಕ್ಕಲಿಗರ ಸಂಘ ಕೂಡ ಪ್ರತಿಭಟನೆ ನಡೆಸಿ ಭಗವಾನ್ ಹೇಳಿಕೆಯನ್ನು ಖಂಡಿಸಿವೆ.
ಮುಂದೆ ಪ್ರತಿಭಟನೆ ದೊಡ್ಡ ಹಂತಕ್ಕೆ ಹೋಗುವ ಸಾಧ್ಯತೆಗಳೂ ದಟ್ಟವಾಗಿದೆ ಎಂದು ಊಹಿಸಿ ಈ ಹಿನ್ನೆಲೆಯಲ್ಲಿ, ಮೈಸೂರಿನಲ್ಲಿರುವ ಭಗವಾನ್ ಅವರ ನಿವಾಸಕ್ಕೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಪೊಲೀಸರನ್ನು ಸಹ ಮನೆ ಕಾವಲಿಗೇ ನೇಮಿಸಲಾಗಿದ್ದು, ಮನೆಯ ಮುಂದೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ.