ಛಲಪತಿಯವರು ಪುನೀತ್ ರಾಜಕುಮಾರ್ ಅವರ ಪ್ರೀತಿಯ ಬಾಡಿಗಾರ್ಡ್ ಆಗಿದ್ದು, ಒಂದು ದಿನವೂ ಬಿಡದಂತೆ ಅಪ್ಪು ಅವರನ್ನು ನೋಡಿಕೊಳ್ಳುತ್ತಿದ್ದರು. ಪುನೀತ್ ರಾಜಕುಮಾರ್ ಅವರು ಛಲಪತಿಯವರನ್ನು ತಮ್ಮ ಸಹೋದರನಂತೆ ಕಾಣುತ್ತಿದ್ದರು. ಛಲಪತಿಯವರು ಸಹ ಅಪ್ಪು ಅವರನ್ನು ಪ್ರೀತಿಯಿಂದ ಆರೋಗ್ಯವಾಗಿ ಇರುವಂತೆ ತಮ್ಮೆಲ್ಲ ಕೆಲಸವನ್ನು ಕಟ್ಟುನಿಟ್ಟಾಗಿ ಶಿಸ್ತಿನಿಂದ ಪಾಲಿಸುತ್ತಿದ್ದರು. ಅಪ್ಪು ಸರ್ ಚಿತ್ರೀಕರಣಕ್ಕಾಗಿ ಶೂಟಿಂಗ್ ಸೆಟ್ಟಿಗೆ ಹೋಗಿರಲಿ, ಮನೆಯಿಂದ ಯಾವುದೇ ಮಾಲ್ಗಳಿಗೆ ಅಥವಾ ಅಂಗಡಿಗಳಿಗೆ ತೆರಳಿರಲಿ, ಇಲ್ಲವೇ ಯಾವುದಾದರು ಸಭೆ ಸಮಾರಂಭಕ್ಕೆ ಹೋಗಲಿ, ಸಂಬಂಧಿಗಳ ಮನೆಗೆ, ಪ್ರವಾಸಕ್ಕೆ ಹೀಗೆ ಎಲ್ಲೇ ಹೋದರು ಛಲಪತಿಯವರು ಪುನೀತ್ ರಾಜಕುಮಾರ್ ಅವರ ಬೆಂಗಾವಲಾಗಿ ಕಾಣಿಸಿಕೊಳ್ಳುತ್ತಿದ್ದರು.
ಛಲಪತಿಯವರು ಅಪ್ಪು ಸರ್ ಅವರ ಬಾಡಿಗಾರ್ಡ್ ಅಷ್ಟೇ ಅಲ್ಲದೆ ಗನ್ ಮಾನ್ ಕೂಡ ಹೌದು. ಪುನೀತ್ ರಾಜಕುಮಾರ್ ಅವರು ಎಲ್ಲಿ ಹೋದರು ಅವರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತವರು ಛಲಪತಿ. ಛಲಪತಿಯವರು ಅಪ್ಪುವಿಗೆ ರಕ್ಷಾ ಕವಚದಂತೆ ಇದ್ದರು. ಮೊದಲು ಛಲಪತಿಯವರು ಮಿಲಿಟರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಸುಮಾರು ಐದು ವರ್ಷಗಳ ಕಾಲ ಅಪ್ಪುವಿನೊಂದಿಗೆ ಜೊತೆಯಾಗಿ ಇದ್ದರು. ಪುನೀತ್ ರಾಜಕುಮಾರ್ ಅವರು ತೀರಿ ಹೋದಾಗ ಛಲಪತಿ ಅವರಿಗಾದ ನೋವು ಅಷ್ಟಿಷ್ಟಲ್ಲ. ಸಹೋದರನಂತಿದ್ದ ತನ್ನ ಸರ್ ಜೀವಕ್ಕೆ ಹೀಗಾಯಿತಲ್ಲ ಎಂದು ಸಮಾಧಿಯ ಬಳಿಯಲ್ಲಿ ಕಣ್ಣೀರು ಇಟ್ಟಿದ್ದನ್ನು ನಾವೆಲ್ಲರೂ ನೋಡಿದ್ದೇವೆ.
ಅಷ್ಟೇ ಅಲ್ಲದೆ ಹಲವು ದಿನಗಳು, ತಿಂಗಳುಗಳು ಉರುಳಿದ ಬಳಿಕವು ಇವರನ್ನು ಪುನೀತ್ ಅವರ ಬಗ್ಗೆ ಕೇಳಿದಾಗಲೆಲ್ಲ ಸಂಕಟದಿಂದ ದುಃಖ ಪಡುತ್ತಿದ್ದರು. ಪುನೀತ್ ರಾಜಕುಮಾರ್ ಅವರು ಇಹಲೋಕ ತ್ಯಜಿಸಿ ವರ್ಷವೇ ಉರುಳಿದೆ. ಆದರೆ ಅವರ ನೆನಪುಗಳು ಎಲ್ಲರಲ್ಲಿಯೂ ಮಾಸದೆ ಉಳಿದಿದೆ. ‘ಜೊತೆಗಿರದ ಜೀವ ಎಂದಿಗೂ ಜೀವಂತ’ ಎಂಬ ಅವರ ಚಿತ್ರದ ಸಾಲುಗಳೇ ಪುನೀತ್ ಅವರ ಭಾವಚಿತ್ರದೊಂದಿಗೆ ಕರ್ನಾಟಕದ ಗಲ್ಲಿ ಗಲ್ಲಿಯಲ್ಲಿಯೂ ಕಾಣಿಸುತ್ತದೆ.
ಪುನೀತ್ ಅವರು ಚಿರನಿದ್ರೆಗೆ ಜಾರಿದ್ದಾರೆ ಎಂಬ ಸುದ್ದಿಯು ಹರಡುತ್ತಿದ್ದಾಗ ಯಾರೊಬ್ಬರೂ ನಂಬದೇ ಒಬ್ಬರನ್ನೊಬ್ಬರು ಹಾಸ್ಯ ಮಾಡಬೇಡಿ ಎಂದು ಬೈದುಕೊಂಡಿದ್ದೆ. ಪುನೀತ್ ಅವರ ವಯಸ್ಸು, ಆಹಾರ ಕ್ರಮ, ಫಿಟ್ನೆಸ್ ಎಲ್ಲವನ್ನು ಅರಿತಿದ್ದ ಕನ್ನಡಿಗರಿಗೆ ಅವರ ಅಗಲುವಿಕೆ ಸುಳ್ಳು ಎಂಬಂತೆ ಭಾಸವಾಗುತ್ತಿತ್ತು. ಕೆಲ ಅಭಿಮಾನಿಗಳು ಪುನೀತ್ ಅವರು ಬದುಕಿದ್ದಾರೆ ಎಂಬ ಯೋಚನೆಯೊಂದಿಗೆ ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ. ಇಂದಿಗೂ ಸಹ ಸಭೆ ಸಮಾರಂಭಗಳಲ್ಲಿ ಒಮ್ಮೆಯಾದರೂ ಅಪ್ಪುವಿನ ನೆನಪು ಮೆಲುಕು ಹಾಕದೆ ಇರಲಾರರು. ಪ್ರತಿಯೊಬ್ಬರು ಅವರನ್ನು ನೆನೆದು ಕಣ್ಣೀರಿಟ್ಟವರೇ.
ಪುಟ್ಟ ಮಕ್ಕಳು, ಮುದುಕರು ಸೇರಿದಂತೆ ಸಾಮಾನ್ಯ ಜನರಿಂದ ಹಿಡಿದು ಸೆಲಬ್ರಿಟಿಗಳವರೆಗೂ ನೋವು ಅನುಭವಿಸಿದವರೇ. ಸಂದರ್ಶನಕಾರರೊಬ್ಬರು ಛಲಪತಿಯವರಿಗೆ, ‘ಯುವರಾಜ್ ಕುಮಾರ್ ನಿಮ್ಮನ್ನು ಬಾಡಿಗಾರ್ಡ್ ಆಗಿ ಕರೆದರೆ ನೀವು ಹೋಗುತ್ತೀರಾ?’ ಎಂದು ಪ್ರಶ್ನೆ ಹಾಕುತ್ತಾರೆ. ಅದಕ್ಕೆ ಉತ್ತರಿಸಿದ ಛಲಪತಿ “ಇಲ್ಲ” ಎನ್ನುತ್ತಾರೆ. ಇಲ್ಲ ಎನ್ನಲು ಕಾರಣವೇನು ಎಂಬುದರ ಕುರಿತಾಗಿ ವಿವರಣೆ ನೀಡಿದ ಛಲಪತಿ, ‘ಈ ಬಗ್ಗೆ ನಾನು ಆಳವಾಗಿ ಯೋಚನೆ ಮಾಡಿದ್ದೇನೆ. ಅಪ್ಪು ಅವರು ಕ್ಯಾರವೆನ್ ಇಂದ ರೆಡಿಯಾಗಿ ಬರುವವರೆಗೂ ನಾನು ಸಿನಿಮಾ ಸೆಟ್ಟಿಗೆ ಹೋಗುತ್ತಿರಲಿಲ್ಲ.
ಯಜಮಾನರ ಜೊತೆಗೆ ಹೋಗುತ್ತಿದ್ದೆ; ಯಜಮಾನರ ಜೊತೆಗೆ ವಾಪಸ್ ಆಗುತ್ತಿದ್ದೆ. ಮಧ್ಯದಲ್ಲಿ ಅವರು ಎಲ್ಲಾದರೂ ಹೋದರೆ ನಾನು ಕೂಡ ಸೆಟ್ಟಲ್ಲಿ ಇರುತ್ತಿರಲಿಲ್ಲ. ನಾನು ಯಾವಾಗಲೂ ಅಪ್ಪು ಸರ್ ಜೊತೆಯಲ್ಲಿಯೇ ಇರುತ್ತಿದ್ದೆ. ಈಗ ಅವರಿಲ್ಲದೆ ಸಿನಿಮಾ ಸೆಟ್ಟಿಗೆ ಹೋಗುವುದು ನನಗೆ ತುಂಬಾ ಕಷ್ಟವಾಗುತ್ತದೆ….’ ‘ಒಂದು ವೇಳೆ ಯುವರಾಜ್ ಕುಮಾರ್ ಅವರು ನನ್ನನ್ನು ಕೇಳಿದರೆ ಅವರಲ್ಲಿ ನಾನು ರಿಕ್ವೆಸ್ಟ್ ಮಾಡಿಕೊಳ್ಳುತ್ತೇನೆ. ಪುನೀತ್ ಅವರಿಲ್ಲದೆ ಸೆಟ್ಟಿಗೆ ಹೋಗಲು ನೋವಾಗುತ್ತದೆ ಎಂದು ತಿಳಿಸುತ್ತೇನೆ’ ಎಂದಿದ್ದಾರೆ. ಮಾತನ್ನು ಮುಂದುವರೆಸಿ, ‘ನಾನೊಬ್ಬ ಅಭಿಮಾನಿಯಾಗಿ ಯುವ ಅವರ ಚಿತ್ರಕ್ಕಾಗಿ ಕಾಯುತ್ತಿದ್ದೇನೆ’ ಎಂದು ಛಲಪತಿಯವರು ಹೇಳಿದ್ದಾರೆ.