ಸಿನಿ ಪ್ರಿಯರು ‘ಕಬ್ಜ’ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ. ಕಬ್ಜ ಚಿತ್ರದ ಕಟೌಟ್ಗಳು ಈಗಾಗಲೇ ಸಿದ್ಧಗೊಳ್ಳುತ್ತಿವೆ. ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಸುದೀಪ್, ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಕಟೌಟ್ಗಳು ತಯಾರಾಗುತ್ತಿವೆ. ಇನ್ನು ದೊಡ್ಮನೆ ರಾಜಕುಮಾರ, ಪುನೀತ್ ಅವರ ಹುಟ್ಟಿದ ಹಬ್ಬವು ಹತ್ತಿರ ಬರುತ್ತಿದೆ. ಕನ್ನಡದ ಜನತೆ ಎಂದಿಗೂ ಮರೆಯದ ಅಪ್ಪುವಿನ ಕಟೌಟ್ ಕೂಡ ಸಿದ್ಧಗೊಳ್ಳುತ್ತಿದೆ.
ಕಬ್ಜ ಚಿತ್ರದ ಪ್ರೀ ರಿಲೀಸ್ ಇವೆಂಟ್ ನ ಪ್ರೆಸ್ ಮೀಟ್ ನಲ್ಲಿ ಉಪೇಂದ್ರ ಅವರು ಪುನೀತ್ ರಾಜಕುಮಾರ್ ಅವರ ಕಟೌಟ್ ದೊಡ್ಡದಿರಲೇಬೇಕು ಎಂದು ಹೇಳಿದರು. ಉಪ್ಪಿ ಹಾಗೂ ಅಪ್ಪು ಇಬ್ಬರು ಒಟ್ಟಾಗಿ ಸಿನಿಮಾ ಒಂದನ್ನು ಮಾಡಬೇಕಿತ್ತು, ಆದರೆ ಅದು ಕನಸಾಗಿ ಉಳಿದಿದೆ. ಆದರೆ ಗಮನ ನೀಡಬೇಕಾದ ಸಂಗತಿ ಎಂದರೆ ರಿಯಲ್ ಸ್ಟಾರ್ ಉಪೇಂದ್ರ ಅವರ ಮೊದಲ ಫ್ಯಾನ್ ಇಂಡಿಯಾ ಚಿತ್ರವು ಪುನೀತ್ ರಾಜಕುಮಾರ್ ಅವರ ಹುಟ್ಟಿದ ದಿನದಂದೇ ಬಿಡುಗಡೆ ಆಗುತ್ತಿದೆ.
ಮಾರ್ಚ್ 17 1975ರಲ್ಲಿ ಪುನೀತ್ ರಾಜಕುಮಾರ್ ಅವರು ಜನಿಸಿದ್ದರು. 2023 ಮಾರ್ಚ್ 17ರಂದು ಭಾರಿ ಮಟ್ಟದಲ್ಲಿ ಸುದ್ದಿಯಾಗಿರುವ ಕಬ್ಜ ಚಿತ್ರವು ಬಿಡುಗಡೆಯಾಗಲಿದೆ. ಉಪ್ಪಿ ಹಾಗೂ ಅಪ್ಪು ಇಬ್ಬರು ಒಟ್ಟಾಗಿ ಸಿನಿಮಾ ಮಾಡದೆ ಇರಬಹುದು; ಆದರೆ ಉತ್ತಮ ಸ್ನೇಹವನ್ನು ಹೊಂದಿದ್ದರು. ಹೊಸದಾದ ಚಿತ್ರ ಕಥೆಗಳು ದೊರೆತಾಗ, ಪರಸ್ಪರ ಭೇಟಿಯಾಗಿ ಚಿತ್ರದ ಕುರಿತಾಗಿ ಗಂಟೆಗಟ್ಟಲೆ ಚರ್ಚಿಸುತ್ತಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪವರ್ ಸ್ಟಾರ್ ಪುನೀತ್ ಅವರು ಎಷ್ಟೊಂದು ಆತ್ಮೀಯರಾಗಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ
ಇವರ ಸ್ನೇಹದ ಸಂಕೇತವೆಂಬಂತೆ ಉಪ್ಪಿ ಅವರ ಮೊದಲ ಫ್ಯಾನ್ ಇಂಡಿಯಾ ಚಿತ್ರವು ಪುನೀತ್ ಅವರ ಹುಟ್ಟಿದ ಹಬ್ಬದಂದೆ ಬಿಡುಗಡೆ ಆಗಲಿದ್ದು,ಅಭಿಮಾನಿಗಳಿಗೆ ಸಂತಸವನ್ನು ತಂದಿದೆ. ಕಬ್ಜ ಚಿತ್ರದ ಪ್ರೀ ರಿಲೀಸ್ ಇವೆಂಟ್ನ ಪ್ರೆಸ್ ಮೀಟ್ ನಲ್ಲಿ ಉಪ್ಪಿ, ಅಪ್ಪು ಅವರನ್ನು ಹೊಗಳಿದ್ದು ಈ ರೀತಿ ಆಗಿದೆ; ” ಪುನೀತ್ ಅವರು ಚಿಕ್ಕ ವಯಸ್ಸಿನಿಂದಲೇ ಸ್ಟಾರ್ ಬಿಡಿ. ಆಗಲೇ ಅವರು ನ್ಯಾಷನಲ್ ಅವಾರ್ಡ್ ಪಡೆದಿದ್ದರು.
‘ಓಂ’ ಚಿತ್ರದ ಕಥೆ ಹೇಳಲು ನಾನು ಮನೆಗೆ ಹೋದಾಗ ಪುನೀತ್ ಅವರು ಶಕ್ತಿಯ ಚೆಂಡಿನ ಹಾಗೆ ಓಡಾಡೋರು. ನೀವ್ಯಾರು ನೋಡಿರಲ್ಲ ಬಿಡಿ; ಆ ಲೆವೆಲ್ ಗೆ ನಾನು ಅವರ ಡಾನ್ಸ್ ನೋಡಿದ್ದೇನೆ. ಮೊದಲು ಶಿವಣ್ಣ ಡಾನ್ಸ್ ಮಾಡಿ ತೋರಿಸಿ, ನನಗಿಂತ ಅವನು ಹೇಗೆ ಡಾನ್ಸ್ ಮಾಡ್ತಾನೆ ನೋಡು ಎಂದರು. ಪುನೀತ್ ಅವರ ಡಾನ್ಸ್ ನೋಡಿ ಏನಯ್ಯ ಈತರ ಡಾನ್ಸ್ ಮಾಡುತ್ತಾರೆ ಎನಿಸಿತು” ಎಂದರು.
ಮಾತನ್ನು ಮುಂದುವರಿಸಿದ ಉಪ್ಪಿ ಅವರು ಕಬ್ಜ ಚಿತ್ರವು ತೆರೆ ಕಾಣಲಿರುವ ಚಿತ್ರಮಂದಿರಗಳಲ್ಲಿ ಸಿದ್ಧಗೊಳ್ಳುತ್ತಿರುವ ಅಪ್ಪು ಅವರ ಕಟೌಟ್ ಕುರಿತಾಗಿ ಪ್ರತಿಕ್ರಿಯಿಸಿದರು. “ಕರ್ನಾಟಕದಲ್ಲಿ ಜನ ಪುನೀತ್ ಅವರನ್ನು ದೇವರ ಹಾಗೆ ಕಾಣುತ್ತಾರೆ. ಅವರೊಟ್ಟಿಗೆ ನಾವು ಬಹಳಷ್ಟು ವರ್ಷಗಳ ಕಾಲ ಪಳಗಿದ್ದೇವೆ. ಅವರು ಹುಟ್ಟಿದ ದಿನದಂದೇ ‘ಕಬ್ಜ’ ಚಿತ್ರವು ಬಿಡುಗಡೆಯಾಗುವುದು ಎಷ್ಟು ದೊಡ್ಡ ವಿಷಯವೆಂದರೆ, ಅವರ ಸ್ಟಾರ್ ದೊಡ್ಡದಿರಬೇಕು.
ಅವರ ಕಟೌಟ್ ದೊಡ್ಡದಿರಲೇಬೇಕು..ನಮ್ಮದು ಇಲ್ಲದೆ ಇದ್ದರೂ ಪರವಾಗಿಲ್ಲ” ಎಂದು ಉಪ್ಪಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಪುನೀತ್ ರಾಜಕುಮಾರ್ ಅವರ ಕಟೌಟ್ ಪಕ್ಕದಲ್ಲಿ ಕುಳಿತುಕೊಳ್ಳುವುದು ತಮ್ಮ ದೊಡ್ಡ ಅದೃಷ್ಟವೆಂದು ಹೇಳಿದ್ದಾರೆ. ಇದರಿಂದಲೇ ತಿಳಿಯುತ್ತದೆ ರಿಯಲ್ ಸ್ಟಾರ್ ಕೂಡ ಪವರ್ ಸ್ಟಾರ್ ನ ಅಭಿಮಾನಿ ಎಂದು. ಜೊತೆಯಲ್ಲಿ, ಉಪ್ಪಿ ಹಾಗೂ ಅಪ್ಪು ಇಬ್ಬರು ಒಳ್ಳೆಯ ಗೆಳೆತನವನ್ನು ಹೊಂದಿದ್ದರು ಎಂದು ತಿಳಿದು ಬರುತ್ತದೆ.