ಡಾಕ್ಟರ್ ರಾಜಕುಮಾರ್ ಅವರ ಜೀವನದಲ್ಲಿ ಅದೊಂದು ಆಸೆ ಕೊನೆಯವರೆಗೂ ಉಳಿದಿತ್ತು..! ಅದ್ಯಾವ ಆಸೆ ಎಂದು ತಿಳಿದವರು ಬಾಯ ಮೇಲೆ ಬೆರಳು ಇಡುವುದು ಖಂಡಿತಾ. ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಹಿರಿಯ ನಟರು. ಸಿಂಗನಲ್ಲೂರು ಪುಟ್ಟಸ್ವಾಮಿಯ ಮುತ್ತುರಾಜ್ ಅವರು ಡಾಕ್ಟರ್ ರಾಜಕುಮಾರ್ ಎಂಬ ತಮ್ಮ ರಂಗನಾಮದಿಂದ ಪರಿಚಿತರು. ಇವರನ್ನು ಕರ್ನಾಟಕದ ಜನತೆ ಅಪ್ಪಾಜಿ ಎಂದು ಗೌರವಯುತವಾಗಿ ಕರೆಯುತ್ತದೆ. ಹಲವಾರು ಮಂದಿ ಅಣ್ಣಾವ್ರು ಎಂದು ಧ್ವನಿ ಎತ್ತಿ ಹೇಳುತ್ತಾರೆ. ನಟರಾಗಿ, ಗಾಯಕರಾಗಿ, ನೃತ್ಯಗಾರರಾಗಿ ಕನ್ನಡ ಚಿತ್ರರಂಗಕ್ಕೆ ಇವರು ಸಲ್ಲಿಸಿದ ಸೇವೆ ಅಪಾರವಾದದ್ದು.
ಇವರನ್ನು ಸಾಂಸ್ಕೃತಿಕ ಐಕಾನ್ ಎಂದು ಪರಿಗಣಿಸಲಾಗಿದೆ. ಇವರನ್ನು ನಟಸಾರ್ವಭೌಮ, ಬಂಗಾರದ ಮನುಷ್ಯ, ಗಾನಗಂಧರ್ವ, ರಸಿಕರ ರಾಜ, ಕನ್ನಡ ಕಂಠೀರವ ಎಂದೂ ಕರೆಯುವುದುಂಟು. ವಿಶೇಷವೆಂದರೆ ಇವರ 35 ಚಲನಚಿತ್ರಗಳು 58 ಬಾರಿ ರಿಮೇಕ್ ಆಗಿದೆ. ಅದು ಹೇಗಪ್ಪಾ? ಎಂದು ಕೇಳಿದರೆ 9 ಭಾಷೆಗಳಲ್ಲಿ ರೀಮೇಕ್ ಆಗಿದೆ. ಈ ರೀತಿಯಾಗಿ ಅತಿ ಹೆಚ್ಚು ಬಾರಿ ರೀಮೇಕ್ ಮಾಡಿದ ಮೊದಲ ನಟ ಎಂಬ ಹೆಗ್ಗಳಿಕೆಗೂ ಡಾಕ್ಟರ ರಾಜಕುಮಾರ್ ಅವರು ಪಾತ್ರರಾಗಿದ್ದಾರೆ. ಚಿತ್ರರಂಗವನ್ನು ಪ್ರವೇಶಿಸುವುದಕ್ಕಿಂತ ಮೊದಲು ರಾಜಕುಮಾರ್ ಅವರು ಗುಬ್ಬಿ ವೀರಣ್ಣ ಅವರ ಡ್ರಾಮಾ ಕಂಪನಿಯಲ್ಲಿ ನಾಟಕ ಮಾಡುತ್ತಾ ಅನೇಕ ವರ್ಷಗಳ ಕಾಲ ಕಳೆದಿದ್ದರು.
1954 ರಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಜಕುಮಾರ್ ಅವರು ಸಾಲು ಸಾಲು ಯಶಸ್ವಿ ಚಿತ್ರಗಳ ಒಡೆಯರಾದರು. ಐತಿಹಾಸಿಕ, ಪೌರಾಣಿಕ, ಕಾಲ್ಪನಿಕ, ಸಂಸಾರಿಕ, ಸಾಹಸಮಯ ಯಾವುದೇ ಕಥೆಯಾದರು ಸರಿ. ಒಂದೇ ಬಾರಿಗೆ ನೆನಪಿನಲ್ಲಿ ಇಟ್ಟುಕೊಂಡು ಹೇಳಲು ಕಷ್ಟವಾಗುವಂತಹ ಡೈಲಾಗ್ಗಳಾದರೂ ಸರಿ. ಹಾಡು, ಕುಣಿತ, ಫೈಟಿಂಗ್ ನಲ್ಲಿ ಎತ್ತಿದ ಕೈ. ಕಲಾದೇವತೆಯೇ ವರ ನೀಡಿದಂತೆ ಸಕಲ ಕಲೆಯಲ್ಲಿಯೂ ಪ್ರಾವೀಣ್ಯತೆಯನ್ನು ಹೊಂದಿದ್ದ ರಾಜಕುಮಾರ್ ಅವರಿಗೆ ಅವಕಾಶಗಳು ಹುಡುಕಿ ಬಂದಿರುವುದರಲ್ಲಿ ಸಂದೇಹವೇ ಇಲ್ಲ.
ರಾಜಕುಮಾರ್ ಅವರದ್ದು ಸರಳ ಸ್ವಭಾವ. ಅಕ್ಕ-ಪಕ್ಕದಲ್ಲಿ ಇರುವವರಿಗೆ, ಚಿತ್ರತಂಡದವರಿಗೆ, ಕುಟುಂಬಸ್ಥರಿಗೆ ಎಂದಿಗೂ ಧ್ವನಿ ಏರಿಸಿ ಕೂಗಿದವರಲ್ಲ. ಕಷ್ಟದಲ್ಲಿರುವವರಿಗೆ ಬೆಂತಿರುಗಿಸಿ ಹೋದವರಲ್ಲ. ಇಂತಹ ಅಭೂತ ಪೂರ್ಣ ವ್ಯಕ್ತಿತ್ವವನ್ನು ಹೊಂದಿದ್ದ ರಾಜಕುಮಾರ್ ಅವರನ್ನು ಕನ್ನಡ ಚಿತ್ರರಂಗವು ಮರೆಯುವ ಮಾತೇ ಇಲ್ಲ. ರಾಜಕುಮಾರ್ ಅವರು ದೈವ ಭಕ್ತರಾಗಿದ್ದರು. ದೇವಸ್ಥಾನಗಳಿಗೆ ತೆರಳಿದ್ದಾಗ ಸಾಮಾನ್ಯ ಜನರಂತೆ ದೇವರ ಎದುರಲ್ಲಿ ಕೂತು ಹಾಡುತ್ತಿದ್ದರು. ದರ್ಶನ ಪಡೆಯಲು ಬಂದವರ ಜೊತೆಯಲ್ಲಿ ಭಜನೆ ಮಾಡುತ್ತಿದ್ದರು.
ಜೀವನದ ಬಹು ಭಾಗವನ್ನು ಕಲೆಯ ಸೇವೆಗಾಗಿಯೇ ಮುಡಿಪಾಗಿಟ್ಟ ರಾಜ್ ಕುಮಾರ್ ಅವರು ನೂರಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದಂತಹ ಮೊದಲ ನಟರಾಗಿದ್ದಾರೆ. ಇನ್ನು ಅವರ ‘ಅನುರಾಗ ಅರಳಿತು’ ಎಂಬ ಚಿತ್ರವು ಏಳು ಭಾಷೆಗಳಲ್ಲಿ ರಿಮೇಕ್ ಆದ ಮೊದಲ ಭಾರತೀಯ ಚಲನಚಿತ್ರ ಎಂಬ ಪಟ್ಟವನ್ನು ಪಡೆದಿದೆ. ಅವರಿಗೆ ಭಾರತೀಯ ಚಿತ್ರರಂಗಕ್ಕೆ ಜೀವಮಾನದ ಕೊಡುಗೆಗಾಗಿ “ದಾದಾಸಾಹೇಬ್ ಫಾಲ್ಕೆ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇವರು ಚಿತ್ರದಲ್ಲಿ ನಟಿಸುತ್ತಾ ನಟಿಸುತ್ತಾ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಕಟ್ಟಿ ನಡೆಸಿಕೊಂಡು ಬಂದಿದ್ದರು. ಅಪಾರ ಸಾಧನೆಗೈದ ಡಾ. ರಾಜಕುಮಾರ್ ಅವರಲ್ಲಿ ಅದೊಂದು ಆಸೆ ಹಾಗೆ ಉಳಿದಿತ್ತು. ಅದೇನೆಂದರೆ ಕೇವಲ ರೈತ ಪಾತ್ರಧಾರಿಯಾಗಿ ನಟಿಸುವುದಷ್ಟೇ ಅಲ್ಲ; ಒಮ್ಮೆಯಾದರೂ ನಿಜವಾಗಿ ರೈತನಾಗಿ ಕೃಷಿಯ ಅಧಿದೇವತೆಯಾದ ಭೂತಾಯಿಯ ಸೇವೆಯನ್ನು ಮಾಡಿ ಖುಷಿಪಡಬೇಕೆಂಬುದು. ಕಲಾ ಪೂಜೆಯ ಮಾಡುತ್ತಾ ವಯಸ್ಸು ಕಳೆಯುತ್ತಿದ್ದರು, ಜೀವನದ ಕೊನೆಯ ಘಟ್ಟದವರೆಗೂ ರೈತನಾಗಬೇಕೆಂಬ ಹಂಬಲವೂ ಅವರಲ್ಲಿ ಹಾಗೆ ಇತ್ತು. ಡಾಕ್ಟರ್ ರಾಜಕುಮಾರ್ ಅವರಲ್ಲಿ ಅಡಗಿದ್ದ ಸೇವಾ ಮನೋಭಾವನೆಯೇ ಅವರಲ್ಲಿ ರೈತನಾಗಬೇಕು ಬೆಳೆ ಬೆಳೆಯಬೇಕು ಎಂಬ ಬಯಕೆಯನ್ನು ಮೂಡಿಸಿತ್ತು ಎಂದು ಹೇಳಿದರೆ ತಪ್ಪಾಗಲಾರದು.