ದೇಶದ ಎಲ್ಲರ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದ ಸರ್ಕಾರ ಹಾಗೂ ಟಾಟಾ ಮೋಟರ್ಸ್ ನ ನಡುವಿನ ಟಾಟಾ ನ್ಯಾನೊ ಕಾರ್ ಉತ್ಪಾದನಾ ಘಟಕ ಸ್ಥಾಪನೆಗೆ ಸಂಬಂಧಿಸಿದ ವಿವಾದಕ್ಕೆ ಅಂತಿಮ ತೆರೆ ಬಿದ್ದಿದೆ. ಕಳೆದ ದಶಕದಿಂದಲೂ ನ್ಯಾಯಾಲಯದ ಅಂಗಳದಲ್ಲಿ ಇದ್ದ ಈ ಪ್ರಕರಣಕ್ಕೆ ಅಂತಿಮ ತೀರ್ಪು ಹೊರಬಿದ್ದಿತ್ತು ಕಾನೂನು ಹೋರಾಟದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಅಲಿಯಾಸ್ ಮುಖ್ಯಮಂತ್ರಿ ಮಮತ ಬ್ಯಾನರ್ಜಿ (West Bengal CM Mamatha banarji) ಅವರಿಗೆ ಸೋಲುಂಟಾಗಿದೆ.
ತಾವು ಜಯಗಳಿಸಿದ ವಿಚಾರವನ್ನು ಸ್ವತಃ ಟಾಟಾ ಮೋಟರ್ಸ್ ಘೋಷಿಸಿಕೊಂಡು ಸ್ಪಷ್ಟಪಡಿಸಿದೆ. ಪಶ್ಚಿಮ ಬಂಗಾಳ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಶನ್ (Industrial Development Corporation) ವಿರುದ್ಧ ಸಿಂಗೂರ್ ಆಟೋಮೊಬೈಲ್ (Singuru auto mobiles) ಉತ್ಪಾದನಾ ಸೌಲಭ್ಯ ಪ್ರಕರಣದಲ್ಲಿ ತಾವು ಗೆದ್ದಿರುವುದಾಗಿ ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.
ಪ್ರಕರಣದ ವಿವರ ನೋಡುವುದಾದರೆ ಹೀಗಿದೆ, ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ನ್ಯಾನೋ ಕಾರು (Nano car) ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲು ಎಡರಂಗದ ಸರ್ಕಾರವು ಸಿಂಗೂರ್, ಹೂಗ್ಲಿಯಲ್ಲಿ ಸುಮಾರು 1,000 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿತ್ತು ಮತ್ತು ಟಾಟಾ ನ್ಯಾನೋಗೆ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸಲು ಟಾಟಾ ಮೋಟಾರ್ಸ್ ಹಸ್ತಾಂತರಿಸಿತು.
ಕಾರು ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಟಾಟಾ ಮೋಟಾರ್ಸ್ (tata motors) ಅಪಾರ ಬಂಡವಾಳ ಹೂಡಿಕೆ ಮಾಡಿ ಯೋಜನೆ ಪ್ಲಾನ್ ಮಾಡಿತ್ತು. ಆದರೆ ಅಷ್ಟರೊಳಗೆ ವಿರೋಧ ಪಕ್ಷದ ನಾಯಕಿಯಾಗಿದ್ದ ಮಮತಾ ಬ್ಯಾನರ್ಜಿ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಅಡ್ಡ ಪಡಿಸಿದರು. ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ TMC ಪಕ್ಷವು ಜಯಗೊಳಿಸಿ ಪಶ್ಚಿಮ ಬಂಗಾಳದಲ್ಲಿ ತಮ್ಮ ಸರ್ಕಾರ ಸ್ಥಾಪನೆ ಮಾಡಿದರು.
ಆನಂತರ ಈ ಘಟಕ ಸ್ಥಾಪನೆಗೆ ಅನುಮತಿಯನ್ನು ಸಂಪೂರ್ಣ ನಿರಾಕರಿಸಿದರು. ಹೀಗಾಗಿ ನ್ಯಾನೋ ಕಾರು ಉತ್ಪಾನದಾ ಘಟಕ ಬಂಗಾಳದಿಂದ ಗುಜರಾತಿಗೆ ಸ್ಥಳಾಂತರವಾಗ ಬೇಕಾಗಿ ಬಂತು ಮತ್ತು ಬಂಗಾಳ ರಾಜ್ಯ ಸರ್ಕಾರದ ನೀತಿಯಿಂದಾಗಿ ತಮಗೆ ಸಾಕಷ್ಟು ನಷ್ಟ ಉಂಟಾಗಿದೆ ಈ ನಷ್ಟವನ್ನು ಸರ್ಕಾರವೇ ಕಟ್ಟಿ ಕೊಡಬೇಕು ಎಂದು ಟಾಟಾ ಮೋಟಾರ್ಸ್ ನ್ಯಾಯಾಲಯದಲ್ಲಿ ಕೇಸ್ ಹಾಕಿತ್ತು.
ಹಲವು ವರ್ಷದವರೆಗೆ ನಡೆದ ಈ ಕಾನೂನು ಹೋರಾಟದಲ್ಲಿ ಅಂತಿಮವಾಗಿ ಗೆದ್ದಿರುವ ಟಾಟಾ ಮೋಟಾರ್ಸ್ ಗೆ ಪಶ್ಚಿಮ ಬಂಗಾಳ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (WBIDCL) ಪರಿಹಾರವಾಗಿ 765 ಕೋಟಿ ರೂ.ಗಳನ್ನು ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಆ ಪ್ರಕಾರ ಸೆಪ್ಟೆಂಬರ್ 1, 2016 ರಿಂದ ವಾರ್ಷಿಕ 11% ಬಡ್ಡಿ ಸೇರಿಸಿ ಈ ಪರಿಹಾರ ಮೊತ್ತವನ್ನು ನೀಡಬೇಕು ಮತ್ತು ಹಕ್ಕುದಾರರು (TML) ಪ್ರತಿವಾದಿಯಿಂದ (WBIDCL) 1 ಕೋಟಿ ರೂ. ಮೊತ್ತವನ್ನು ಕಾನೂನು ಪ್ರಕ್ರಿಯೆಯ ವೆಚ್ಚಕ್ಕೆ ಮರುಪಡೆಯಲು ಅರ್ಹರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.
ಈ ಪ್ರಕರಣದಿಂದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ತೀವ್ರ ಮುಖಭಂಗ ಉಂಟಾಗಿದ್ದು, ಅವರ ತಪ್ಪು ನೀತಿಯಿಂದಾಗಿ ಇಂದು ಸಾರ್ವಜನಿಕರ ಅಪಾರ ಹಣ ಪರಿಹಾರವಾಗಿ ನೀಡಬೇಕಾಗಿದೆ ಎಂದು ವಿರೋಧ ಪಕ್ಷಗಳು ದೀದಿಯನ್ನು ಟೀಕಿಸುತ್ತಿವೆ. ಟಾಟಾ ಮೋಟರ್ಸ್ ಗೆ ಅನುಮತಿ ನಿರಾಕರಿಸಲು ಯಾವ ಸಕಾರಣ ಇತ್ತು ಎಂದು ತಿಳಿದುಬಂದಿಲ್ಲ ಆದರೆ ಈಗ ಪಶ್ಚಾತಾಪದೊಂದಿಗೆ ಅತಿ ದೊಡ್ಡ ನಷ್ಟವನ್ನು ಪಶ್ಚಿಮ ಬಂಗಾಳ ಸರ್ಕಾರ ಎದುರಿಸಬೇಕಾಗಿದೆ.