ಕನ್ನಡ ಸಿನಿಮಾ ಇಂಡಸ್ಟ್ರಿಯ ದಿಗ್ಗಜರುಗಳು ಎಂದೇ ಕರೆಸಿಕೊಂಡವರು ಡಾ. ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರು. ಸಿನಿಮಾ ತೆರೆ ಮೇಲೆ ಮಾತ್ರ ಅಲ್ಲ ವೈಯಕ್ತಿಕವಾಗಿ ಕೂಡ ಇವರಿಬ್ಬರ ನಡುವೆ ಅಷ್ಟು ಆತ್ಮೀಯತೆ ಇತ್ತು. ಇಬ್ಬರು ಸಹ ಒಂದೇ ಕುಟುಂಬದವರು ಎನ್ನುವಷ್ಟರ ಮಟ್ಟಿಗೆ ಆತ್ಮೀಯತೆ ಹೊಂದಿದ್ದರು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಇಬ್ಬರು ವಿಭಿನ್ನ ವ್ಯಕ್ತಿತ್ವದವರು ಆಗಿದ್ದರೂ ಕೂಡ ಸ್ನೇಹ ಎನ್ನುವ ಒಂದು ಅಂಶ ಇಬ್ಬರನ್ನು ಒಂದು ಆತ್ಮ ಎರಡು ದೇಹ ಎನ್ನುವಂತೆ ಬೆಸದಿತ್ತು.
ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಬಳಿಕ ಇಂಡಸ್ಟ್ರಿಯಲ್ಲಿ ಯಾವ ಇಬ್ಬರು ಸ್ಟಾರ್ ಕೂಡ ಅಷ್ಟೊಂದು ಆತ್ಮೀಯತೆಯಿಂದ ಬೆರೆತಿರುವ ಉದಾಹರಣೆಯೇ ಇಲ್ಲ. ಇವರಿಬ್ಬರ ಸ್ನೇಹಕ್ಕೆ ಮತ್ತು ಇವರಿಬ್ಬರ ನಡುವೆ ಇರುವ ಭಾಂದವ್ಯಕ್ಕೆ ಆ ಅನುಬಂಧಕ್ಕೆ ಸಾಕ್ಷಿ ಎನ್ನುವಂತೆ ಇತ್ತು ದಿಗ್ಗಜರು ಸಿನಿಮಾ. ದಿಗ್ಗಜರು ಸಿನಿಮಾಗಿಂತ ಮುಂಚೆ ಇನ್ನು ಹಲವು ಸಿನಿಮಾಗಳಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಕಾಣಿಸಿಕೊಂಡಿದ್ದಾರೆ.
ವಿಷ್ಣುವರ್ಧನ್ ಅವರು ನಾಯಕ ನಟನಾಗಿ ಅಭಿನಯಿಸಿದ್ದ ಮೊದಲ ಸಿನಿಮಾ ನಾಗರಹಾವು ಚಿತ್ರದಲ್ಲಿಯೇ ಅಂಬರೀಶ್ ಅವರು ಕೂಡ ಜಲೀಲ ಪಾತ್ರ ಮಾಡಿದ್ದು, ಅದೇ ಮೊದಲು ಚಿತ್ರಕ್ಕಾಗಿ ಅಂಬರೀಶ್ ಅವರು ಬಣ್ಣ ಹಚ್ಚಿ ತೆರೆ ಮೇಲೆ ಕಾಣಿಸಿಕೊಂಡಿದ್ದು. ಇದಾದ ಬಳಿಕ ಸ್ನೇಹಿತರ ಸವಾಲ್, ಮುಯ್ಯಿಗೆ ಮುಯ್ಯಿ, ಅವಳ ಹೆಜ್ಜೆ, ಸ್ನೇಹ ಸೇಡು, ಹಬ್ಬ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳಲ್ಲಿ ಅಂಬಿ ಹಾಗೂ ವಿಷ್ಣು ಜೊತೆಯಾಗಿದ್ದರು. ಇದೆಲ್ಲಾ ಸಿನಿಮಾಗಳ ಜೊತೆ ಅವರ ವೃತ್ತಿರಂಗದ ಶ್ರೇಷ್ಠ ಸಿನಿಮಾ ಎಂದರೆ ಅದು ದಿಗ್ಗಜರು ಸಿನಿಮಾ.
ಈ ಮಾತನ್ನು ಸ್ವತಃ ಅಂಬರೀಷ್ ಅವರೇ ಒಮ್ಮೆ ವೇದಿಕೆಯೊಂದರಲ್ಲಿ ಹೇಳಿಕೊಂಡಿದ್ದಾರೆ. ದಿಗ್ಗಜರು ಸಿನಿಮಾ ತಯಾರಾಗಿದ್ದ ಸಮಯದಲ್ಲಿ ಅಂಬಿ ಒಮ್ಮೆ ನನ್ನ ಗೆಳೆಯನೊಂದಿಗೆ ಇಂತಹ ಸಿನಿಮಾ ಮಾಡಿ ಬಹಳ ಸಮಾಧಾನ ಆಯ್ತು, ಸಂತೋಷ ಆಯ್ತು. ಇಷ್ಟು ವರ್ಷದ ಸಿನಿಮಾ ಎಲ್ಲಾ ಒಂದು ತೂಕ ಆದರೆ ಈ ಸಿನಿಮಾದ್ದೇ ಒಂದು ತೂಕ. ಈ ಸಿನಿಮಾದ ವಿಶೇಷ ಹೀಗೆ ಇರಲಿ ಈ ಕಾರಣಕ್ಕೆ ನಾನು ಇನ್ನು ಮುಂದೆ ವಿಷ್ಣು ಜೊತೆ ಸಿನಿಮಾ ಮಾಡುವುದಿಲ್ಲ ನಮ್ಮಿಬ್ಬರ ಬದುಕಿಗೆ ದಾಖಲೆ ಆಗಿ ಉಡುಗೊರೆಯಾಗಿರಲಿ ಎಂದಿದ್ದರು.
ಆದರೆ ಅದೃಷ್ಟವೋ ದುರಾದೃಷ್ಟವೋ ಅವರ ಮಾತು ನಿಜವಾಯಿತು. ಮತ್ತೊಮ್ಮೆ ಅವರಿಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇಡೀ ಕರುನಾಡು ಮೆಚ್ಚಿದ ಸ್ಟಾರ್ ಜೋಡಿಯ ಕೊನೆ ಸಿನಿಮಾ ಆಗಿ ದಿಗ್ಗಜರು ಸಿನಿಮಾ ಉಳಿದುಕೊಂಡು ಬಿಟ್ಟಿತು. ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಸ್ನೇಹದ ಬಗ್ಗೆ ಹೇಳುವುದಾದರೆ ಅಂಬರೀಶ್ ಅವರು ಬಹಳ ಒರಟಾಗಿ ಕಂಡರೂ ಮನಸ್ಸಿನಲ್ಲಿ ಬಹಳ ಮೃದು ಸ್ವಭಾವದವರು. ವಿಷ್ಣುವರ್ಧನ್ ಅವರು ಸಹ ಬಹಳ ಸಾಫ್ಟ್ ಹರ್ಟೆಡ್.
ಅಂಬರೀಶ್ ಅವರು ಇದ್ದಲ್ಲಿ ಮಜಾ ಮೋಜು ಮಸ್ತಿ ಎಲ್ಲ ಇದ್ದೆ ಇರುತ್ತದೆ, ಆದರೆ ವಿಷ್ಣುವರ್ಧನ್ ಅವರು ಮಾತ್ರ ಬಹಳ ಸರಳವಾಗಿದ್ದರು. ಇವರಿಬ್ಬರು ವಿಭಿನ್ನ ವ್ಯಕ್ತಿತ್ವದವರಾಗಿದ್ದರು ಅದನ್ನೂ ಮೀರಿ ಸ್ನೇಹ ಗಟ್ಟಿಯಾಗಿತ್ತು. ಇಬ್ಬರು ಒಬ್ಬರಿಗೊಬ್ಬರು ಬಹಳ ಹೊಂದುಕೊಂಡು ಸ್ನೇಹ ಉಳಿಸಿಕೊಂಡಿದ್ದರು. ಅಂಬರೀಶ್ ಅವರು ರಾಜಕೀಯದಲ್ಲಿ ಸಕ್ರಿಯ ರಾಗಿದ್ದಾಗ ಅವರ ಪ್ರಚಾರ ಕಾರ್ಯಗಳಲ್ಲಿ ಮತ್ತು ರಾಜಕೀಯ ಏಳಿಗೆಗಾಗಿ ವಿಷ್ಣುವರ್ಧನ್ ಅವರು ಸಹ ಶ್ರಮಿಸಿದ್ದರು.
ವಿಷ್ಣುವರ್ಧನ್ ಅವರು ತಮ್ಮ ಜೀವನದಲ್ಲಿ ಯಾರಿಗಾಗಿಯಾದರೂ ಪ್ರಚಾರ ಮಾಡಿದ್ದರೆ ಅದು ಅಂಬಿಗಾಗಿ ಮಾತ್ರ. ಅಂಬರೀಶ್ ಅವರು ಸಹ ತನ್ನ ಸಹೋದರ ಎನ್ನುವಂತೆ ವಿಷ್ಣುವರ್ಧನ್ ಅವರನ್ನು ಕಾಣುತ್ತಿದ್ದರು. ಇದೇ ಕಾರಣಕ್ಕಾಗಿ ವಿಷ್ಣುವರ್ಧನ್ ಅವರು ಇಹಲೋಕ ಯಾತ್ರೆ ಮುಗಿಸಿದಾಗ ಅದರ ಸಂಪೂರ್ಣ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡು ಅಂತಿಮ ವಿಧಿ ವಿಧಾನ ಎಲ್ಲವನ್ನು ಒಬ್ಬ ಸಹೋದರನಂತೆ ಮುಂದೆ ನಿಂತುಕೊಂಡು ಮಾಡಿ ಮುಗಿಸಿದ್ದರು. ಇವರಿಬ್ಬರು ಮತ್ತೆ ಕರುನಾಡಿನಲ್ಲಿ ಹುಟ್ಟಿ ಬರಲಿ ಮತ್ತೊಮ್ಮೆ ಕರ್ನಾಟಕದ ಹೆಸರು ಉಳಿಸುವ ತಾಯಿ ಭುವನೇಶ್ವರಿಯ ಹೆಮ್ಮೆಯ ಮಕ್ಕಳಾಗಲಿ ಎನ್ನುವುದು ಕನ್ನಡಿಗರ ಆಶಯ.