‘ಗಜ’ ಚಿತ್ರವು 2008ರಲ್ಲಿ ತೆರೆಕಂಡ ಸಾಹಸ ಹಾಗೂ ಪ್ರಣಯದ ಸಿನಿಮಾ. ಅದೇ ವೇಳೆಯಲ್ಲಿ ಅನೇಕ ಚಿತ್ರಗಳು ಬಿಡುಗಡೆಯಾಗಿ ಪ್ರದರ್ಶನ ನೀಡಿವೆ. ಕೆ ಮಾದೇಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಗಜ’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದೇವರಾಜ್ ಅವರು ನಟಿಸಿದ್ದಾರೆ. ಕೆ ಮಾದೇಶ್, ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕರು. ಇವರು ರಾಜ ವಿಷ್ಣು, ಪವರ್, ಬೃಂದಾವನ, ಗಜ, ರಾಮ್ ಹೀಗೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಗಜ ಚಿತ್ರಕ್ಕೆ ಯಾವ ಯಾವ ಚಿತ್ರಗಳು ಪೈಪೋಟಿ ನೀಡಿದ್ದವು ಎಂದು ಚಿತ್ರದ ನಿರ್ದೇಶಕರೇ ಮಾತನಾಡಿದ ವಿಡಿಯೋವೊಂದು ಉತ್ತರವನ್ನು ಹೇಳುತ್ತದೆ. ‘ಗಜ’ ಚಿತ್ರವು ಕಾದಂಬರಿಕಾರ ಪಿ. ರಾಮಚಂದ್ರರಾವ್ (ಚಂದು) ಅವರ ಕಥೆಯನ್ನು ಆಧರಿಸಿದ ಚಿತ್ರವೆಂದು ಚಿತ್ರತಂಡವೇ ತಿಳಿಸಿದೆ. ಇದು 2005ರಲ್ಲಿ ತೆರೆಕಂಡ ತೆಲುಗು ಭಾಷೆಯ ಭದ್ರ ಚಿತ್ರದ ರಿಮೇಕ್ ಆಗಿದೆ. ಚಿತ್ರದ ಕಥೆಯು ಈ ರೀತಿ ಆಗಿದೆ; ಗಜ ಹಾಗೂ ಕೃಷ್ಣ ಸ್ನೇಹಿತರಾಗಿದ್ದು, ರಜಾದಲ್ಲಿ ಗಜ ಕೃಷ್ಣನ ಮನೆಗೆ ಬರುತ್ತಾನೆ.
ಕೃಷ್ಣನ ಸಹೋದರ ದೇವೇಂದ್ರನು ಒಂದು ಗುಂಪಿನೊಂದಿಗೆ ದ್ವೇಷ ಹೊಂದಿರುವ ವಿಷಯವು ಗಜನಿಗೆ ತಿಳಿಯುತ್ತದೆ. ಎರಡು ಕುಟುಂಬಗಳಿಗೆ ಒಂದನ್ನೊಂದು ಕಂಡರೆ ಆಗುವುದಿಲ್ಲ ಎಂಬ ವಿಚಾರವು ತಿಳಿದು ಗಜ ಪರಿಸ್ಥಿತಿಯನ್ನು ಸಮಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ತನ್ನ ಗೆಳೆಯ, ಗೆಳೆಯನ ಸಹೋದರನನ್ನು ಕಳೆದುಕೊಳ್ಳುತ್ತಾನೆ. ಆ ಮಧ್ಯದಲ್ಲಿ ಗಜನಿಗೆ ದೇವೇಂದ್ರನ ತಂಗಿ ಶ್ವೇತಾಳೊಂದಿಗೆ ಪ್ರೀತಿಯಾಗಿರುತ್ತದೆ. ತನ್ನವರನ್ನು ಕಳೆದುಕೊಂಡ ಗಜ ಕೋಪದಿಂದ ವಿರುದ್ಧ ಗುಂಪಿನ ಒಬ್ಬನನ್ನು ಕೊಲ್ಲುತ್ತಾನೆ.
ಪರಾರಿಯಾಗಲು ಶ್ವೇತಾಳೊಂದಿಗೆ ಗಜ ಬೆಂಗಳೂರಿಗೆ ಹೋದ ನಂತರವೂ ದ್ವೇಷ, ಹೋರಾಟವು ಮುಂದುವರೆದು ಗಜ ಗೆಲ್ಲುತ್ತಾನೆ. ಗಜ ಚಿತ್ರವು ಶ್ರೀನಿವಾಸ ಮೂರ್ತಿ ಹಾಗೂ ಸುರೇಶ್ ಗೌಡ ಅವರಿಂದ ನಿರ್ಮಿಸಲ್ಪಟ್ಟಿದ್ದು, ಕೆ ವಿರಾಜು ಅವರು ಸಂಭಾಷಣೆಯನ್ನು ಬರೆದಿದ್ದಾರೆ. ವಿ ಹರಿಕೃಷ್ಣ ರಚನೆಯ ಸಂಗೀತವಿದೆ. “ಐತಲಕಾಡಿ”, “ಬಂಗಾರಿ ಯಾರೇ ನೀ”, “ಲಂಬುಜಿ”, “ಮಾತು ನನ್ನೊಳು” ಹೀಗೆ ಚಿತ್ರದ ಎಲ್ಲಾ ಹಾಡುಗಳು ಇಂದಿಗೂ ಜನರ ಬಾಯಿಂದ ಕೇಳಿ ಬರುತ್ತವೆ.
ಸೆನ್ಸಾರ್ ಮಂಡಳಿಯಿಂದ ‘ಎ’ ಎಂದು ಪ್ರಮಾಣೀಕರಿಸಲ್ಪಟ್ಟ ಬಳಿಕ ಗಜ ಚಿತ್ರವು 2008ರ ಜನವರಿ 11ರಂದು ಬಿಡುಗಡೆ ಆಯ್ತು. ಈ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಮೂರು ಸ್ಟಾರ್ ನಟರ ಚಿತ್ರಗಳು ಬಿಡುಗಡೆ ಆಗಿದ್ದವು. ಚಿತ್ರಕಥೆ ಹಾಗೂ ಡಿ ಬಾಸ್ ದರ್ಶನ್ ಅವರ ಅಭಿನಯದಿಂದ ಗಜ ಚಿತ್ರವು ಸೋಲಲಿಲ್ಲ. ಈ ಕುರಿತಾಗಿ ಸಂದರ್ಶನ ಒಂದರಲ್ಲಿ ಚಿತ್ರತಂಡದ ಸದಸ್ಯರೇ ಹೇಳಿರುವ ಹೇಳಿಕೆಗಳು.
‘ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗಾಳಿಪಟ’, ಪುನೀತ್ ರಾಜಕುಮಾರ್ ಅವರು ನಟಿಸಿರುವಂತಹ ‘ಬಿಂದಾಸ್’ ಚಿತ್ರ, ಕಿಚ್ಚ ಸುದೀಪ್ ಅವರ ನಟನೆಯ ‘ಜಸ್ಟ್ ಮಾತ್ ಮಾತಲ್ಲಿ’ ಚಿತ್ರ ಹೀಗೆ ಈ ಮೂರು ಚಿತ್ರಗಳು ಗಜ ಚಿತ್ರವು ಬಿಡುಗಡೆಯಾಗುವ ವೇಳೆಯಲ್ಲಿಯೇ ಬಿಡುಗಡೆ ಆಯ್ತು. ಒಂದರ ಹಿಂದೆ ಒಂದರಂತೆ ಆ ಮೂರು ಚಿತ್ರಗಳು ನಮ್ಮ ಗಜ ಚಿತ್ರಕ್ಕೆ ಪೈಪೋಟಿ ನೀಡಿದ್ದವು. ಎಲ್ಲಾ ಚಿತ್ರಗಳು ತುಂಬಾ ಚೆನ್ನಾಗಿಯೇ ಇತ್ತು.
ಗಜ ಚಿತ್ರದ ಹಾಡುಗಳು ಅದಾಗಲೇ ಹಿಟ್ ಆಗಿತ್ತು. ಇವೆಲ್ಲ ಚಿತ್ರಗಳ ನಡುವೆ ದರ್ಶನ್ ಅಭಿನಯದ ಗಜ ಚಿತ್ರವು ನಿಂತುಕೊಂಡಿತು. ಶುಕ್ರವಾರ ಎಂದರೆ ಪ್ರತಿ ಚಿತ್ರತಂಡಕ್ಕೆ ಇನ್ನೊಂದು ಚಿತ್ರತಂಡವು ಸ್ಪರ್ಧಿಯೇ… ತದನಂತರ ನಾವು ಸ್ನೇಹಿತರೇ.. ಯಾಕೆಂದರೆ ಪ್ರತಿಯೊಬ್ಬರಿಗೂ ತಮ್ಮ ಚಿತ್ರ ಗೆಲ್ಲಬೇಕು ಎಂಬ ಆಸೆ ಇರುತ್ತದೆ ಮತ್ತು ಚಿತ್ರೀಕರಣವು ಮುಗಿದ ಬಳಿಕ ಸರಿಯಾದ ಸಮಯದಲ್ಲಿ ಚಿತ್ರವು ಬಿಡುಗಡೆ ಆಗಲೇಬೇಕು’ ಎಂದಿದ್ದಾರೆ.