ಅನೇಕ ರೈತರಿಗೆ ನ್ಯಾಯವಾಗಿ ಬೆಳೆವಿಮೆ ಸಿಗುತ್ತಿಲ್ಲವೆಂಬ ಬೇಸರವಿದೆ. ಇದಕ್ಕೆ ಪೂರಕವಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವಿಮಾ ಕಂಪನಿಗಳ ಉದ್ದಾರಕ್ಕೆ ಮಾತ್ರ ಸೀಮಿತವೆಂಬ ಆಪಾದನೆಯೂ ಇದು. ರೈತರು ತಮ್ಮ ಬೆವರು ಸುರಿಸಿ ಕಟ್ಟಿದ ಪ್ರೀಮಿಯಂ ಕೂಡ ಕೈಗೆ ಸಿಗುತ್ತಿಲ್ಲವಾದ್ದರಿಂದ ಬೆಳೆ ವಿಮೆ ಯೋಜನೆಯ ಮೇಲೆ ರೈತರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದು ಆಪತ್ತಿಗೆ ಒದಗುತ್ತದೆ ಎಂಬ ಭರವಸೆಯನ್ನೇ ರೈತರು ಕಳೆದುಕೊಳ್ಳುತ್ತಿರುವುದು ಸುಳ್ಳಲ್ಲ.
ನಿಜ, ಅನೇಕ ಕಡೆಗಳಲ್ಲಿ ಬೆಳೆ ಹಾಳಾದ ಸಂದರ್ಭದಲ್ಲಿ ನಿಗದಿತ ಪರಿಹಾರದ (ಸಮ್ ಅಶ್ಯೂರ್ಡ್) ಬದಲಿಗೆ ಕಟ್ಟಿದ ಪ್ರೀಮಿಯಂ ಕೂಡ ರೈತರಿಗೆ ಸಿಗುತ್ತಿಲ್ಲ. ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟಕ್ಕೆ ಪರಿಹಾರ ಪಾವತಿಸಬೇಕಿದೆ. ಆದರೆ, ಆಣೆವಾರು ಮಾಡುವಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ವಿಮೆ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿರುವುದು, ವಿಮಾ ಷರತ್ತುಗಳಲ್ಲಿ ಲೋಪವಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ರೈತರು ಸಂತ್ರಸ್ತರಾಗಿದ್ದಾರೆ.
ಹಾಗಂತ, ಬೆಳೆ ವಿಮಾ ಯೋಜನೆ ಪೂರಾ ಕಳಪೆ ಏನಲ್ಲ. ನಿಜವಾಗಿಯೂ ಬೆಳೆ ನಷ್ಟ ಅನುಭವಿಸಿದ ಬಹಳಷ್ಟು ರೈತರಿಗೆ ಪರಿಹಾರ ಸಿಕ್ಕಿದೆ. ಹೀಗೆ ನಿಶ್ಚಿತ ವಿಮಾ ಪರಿಹಾರ ಪಡೆದ ಎಲ್ಲ ರೈತರೂ ಯೋಜನೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದ್ದಾರೆ ಎಂಬುವುದನ್ನು ಗಮನಿಸಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಕೆಲವು ಪಾಲಿಸಲೇ ಬೇಕಾದ ಕಡ್ಡಾಯದ ನಿಯಮಗಳಿವೆ. ಈ ನಿಯಮಗಳನ್ನು ಪಾಲಿಸದ ರೈತರಿಗೆ ಬೆಳೆ ವಿಮೆ ಪರಿಹಾರ ಸಿಗುವುದಿಲ್ಲ.
ಯಾವುದೇ ನೈಸರ್ಗಿಕ ವಿಕೋಪಗಳಿಂದ ಅಥವಾ ತಮ್ಮ ಕೈ ಮೀರಿದ ಯಾವುದೇ ನೈಸರ್ಗಿಕ ಅವಘಡಗಳಿಂದ ಬೆಳೆ ಹಾನಿ ಸಂಭವಿಸಿದರೆ ರೈತರು ವಿಮೆ ಮಾಡಿದ ಮೊತ್ತವನ್ನು (ಸಮ್ ಅಶ್ಯೂರ್ಡ್) ಇನ್ಶೂರೆನ್ಸ್ ಕಂಪನಿಯಿಂದ ಪಡೆಯುತ್ತಾರೆ. ಹೀಗೆ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ರೈತರು ಬೆಳೆ ಸಮೀಕ್ಷೆ ಆಪ್ನಲ್ಲಿ ಮಾಹಿತಿ ಅಪ್ಲೋಡ್ ಮಾಡಬೇಕು. ಒಂದು ವೇಳೆ ಮೊಬೈಲ್ನಲ್ಲಿ ಮಾಹಿತಿ ಅಪ್ಲೋಡ್ ಮಾಡುವುದು ಗೊತ್ತಿರದಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮಾಡಿಸಬಹುದು.
ಬಳಿಕ ಪ್ರಕೃತಿ ವಿಕೋಪದಿಂದ ಬೆಳೆ ಹಾಳಾದಾಗ ರೈತರು ಯಾವ ವಿಮಾ ಕಂಪನಿಗಳಿಗೆ ಬೆಳೆ ವಿಮೆ ಮಾಡಿಸಿದ್ದಾರೋ ಆ ವಿಮಾ ಕಂಪನಿಗೆ 72 ಗಂಟೆಯೊಳಗೆ ಕರೆ ಮಾಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾಳಾದ ಕುರಿತು ಪರಿಶೀಲನೆ ನಡೆಸುತ್ತಾರೆ. ಯಾವ ಪ್ರಮಾಣದಲ್ಲಿ ಬೆಳೆ ಹಾಳಾಗಿದೆಯೋ ಅದನ್ನು ಪರಿಶೀಲಿಸಿ ರೈತರಿಗೆ ಪರಿಹಾರ ನೀಡಲು ಮೇಲಧಿಕಾರಿಗಳ ಗಮನಕ್ಕೆ ತರುತ್ತಾರೆ. ಮೇಲಧಿಕಾರಿಗಳು ಕೆಲವು ದಿನಗಳ ನಂತರ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆ ಮಾಡುತ್ತಾರೆ.
ಇದೆಲ್ಲಕ್ಕೂ ಬಹುಮುಖ್ಯವಾಗಿ ಬೆಳೆ ವಿಮಾ ಪರಿಹಾರ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಬೇಕೆಂದರೆ ಕಡ್ಡಾಯವಾಗಿ ಆ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಈ ಸಮಸ್ಯೆಯ ತೊಡಕಿನಿಂದಾಗಿಯೇ ಪಿಎಂ ಕಿಸಾನ್ ಯೋಜನೆಯ ಲಾಭ ಬಹಳಷ್ಟು ರೈತರಿಗೆ ತಲುಪಿಲ್ಲ. ಕುಚೋದ್ಯವೆಂದರೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು ಹಲವು ಬಾರಿ ಸರಕಾರ ಗಡುವು ನೀಡಿದರೂ ಈಗಲೂ ಬಹಳಷ್ಟು ರೈತರು ಪಿಎಂ ಕಿಸಾನ್ ಯೋಜನೆಯಲ್ಲಿ ಇಕೆವೈಸಿ ಮಾಡಿಸಿಲ್ಲ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲೂ ಇದೇ ಸಮಸ್ಯೆಯಿಂದ ಅನೇಕ ರೈತರಿಗೆ ಬೆಳೆವಿಮಾ ಪರಿಹಾರ ತಲುಪುತ್ತಿಲ್ಲ ಎಂಬುವುದನ್ನು ಗಮನಿಸಬೇಕು.
2016ರಿಂದ ಅಂದರೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ನೋಂದಾಯಿತ ಕೆಲವು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗದ ಕಾರಣ ಸಹಾಯಧನ ವರ್ಗಾವಣೆಯಾಗಿಲ್ಲ. India post payments bank ವತಿಯಿಂದ ಆಂದೋಲನ ಏರ್ಪಡಿಸಿ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿಸಿ NPCI Mapping ಮಾಡಿಸಲು ಕೋರಲಾಗಿದೆ.
ಹೀಗಾಗಿ, ರೈತರು ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಿಸಬೇಕು. NPCI Mapping ಮಾಡಿಸಬೇಕು. ಇದನ್ನು ಮಾಡದಿದ್ದರೆ ನಿಮ್ಮ ಖಾತೆಗಳಿಗೆ ಬೆಳೆ ವಿಮೆ ಜಮಾ ಆಗುವುದಿಲ್ಲ. ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಯೋ? ಇಲ್ಲವೋ? ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು. ಇಲ್ಲಿ 2019ಕ್ಕಿಂತ ಮೊದಲಿನ ಬೆಳೆವಿಮೆ ಚೆಕ್ ಮಾಡಲು ಆಧಾರ ನಂಬರ್ ಹಾಕಿ ನೋಡಬಹುದು. ಆದರೆ, 2019ರ ನಂತರದ ಬೆಳೆವಿಮೆ ಚೆಕ್ ಮಾಡಲು ಬೆಳೆ ವಿಮೆ ಕಟ್ಟಿರುವ ರಶೀದಿ ನಂಬರ್ ಅಥವಾ ವೊಬೈಲ್ ನಂಬರ್ ಹಾಕಿ ಚೆಕ್ ಮಾಡಬಹುದು.
ಇಲ್ಲಿ ಕ್ಲಿಕ್ ಮಾಡಿದ ಕೂಡಲೇ ಸಂರಕ್ಷಣೆ ಅಧಿಕೃತ ಜಾಲತಾಣ ತೆರೆದುಕೊಳ್ಳುತ್ತದೆ. ನಂತರ ಅಲ್ಲಿ ವರ್ಷ ಆಯ್ಕೆಯಲ್ಲಿ 2022-23 ಮತ್ತು ಋತು ಆಯ್ಕೆಯಲ್ಲಿ Kharif/Rabi/Summer ಸೆಲೆಕ್ಟ್ ಮಾಡಿ, ಮುಂದೆ/Go ಮೇಲೆ ಕ್ಲಿಕ್ ಮಾಡಬೇಕು. ಬಳಿಕ Farmer ಕಾಲಂನಲ್ಲಿ Check status ಮೇಲೆ ಒತ್ತಿ, Mobile ನಂಬರ್ ಸೆಲೆಕ್ಟ್ ಮಾಡಿ ಮೊಬೈಲ್ ನಂಬರ್ ಹಾಕಿ ಅಲ್ಲಿರುವ Captcha ಮಾಡಬೇಕು.
ಆಗ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೋ? ಇಲ್ಲವೋ ಎಂಬುವುದು ತಿಳಿಯುತ್ತದೆ. ಅಲ್ಲಿ NPCI not seeded, Adhar inactive ಎಂದು ತೋರಿಸಿದರೆ, ನಿಮ್ಮ ಆಧಾರ್ ಲಿಂಕ್ ಆಗಿಲ್ಲ ಎಂದೇ ಅರ್ಥ. ಅಂತಹ ರೈತರು ಕೂಡಲೇ ಆಧಾರ್ ಲಿಂಕ್ ಮಾಡಬೇಕು. ಇಲ್ಲದಿದ್ದರೆ ಸುತಾರಾಂ ಬೆಳೆವಿಮೆ ಜಮಾ ಆಗುವುದಿಲ್ಲ.