ಸರ್ಕಾರದ ಯೋಜನೆಗಳನ್ನು ಪಡೆಯಲು ಜನರು ನಕಲಿ ಆಧಾರ್, ವೋಟರ್ ಐಡಿ ಸೇರಿದಂತೆ ಅನೇಕ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸಿಕ್ಕಿಬಿದ್ದ ಸಾಕಷ್ಟು ನಿದರ್ಶನಗಳಿವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಯ ಲಾಭ ಪಡೆಯಲು ತನ್ನ ವೇಷ ಬದಲಿಸಿಕೊಂಡಿದ್ದಾನೆ.
ಬುರ್ಖಾ ಧರಿಸಿಕೊಂಡ ಪುರುಷ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ ಕುಂದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾಣದಲ್ಲಿ ಘಟನೆ ನಡೆಯಿತು.
ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕರು ಹಾಗೂ ಗ್ರಾಮಸ್ಥರು, ಬುರ್ಖಾಧಾರಿಯ ಬಗ್ಗೆ ಸಂಶಯ ವ್ಯಕ್ತಪಡಿಸಿ ಬುರ್ಖಾ ತೆಗೆಸಿದಾಗ ಸತ್ಯ ಬೆಳಕಿಗೆ ಬಂದಿದೆ.
ಹೌದು, ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಸಂಶಿಯ ವ್ಯಕ್ತಿಯ ಚಲನವಲನ ಗಮನಿಸಿದ ಗ್ರಾಮಸ್ಥರಿಗೆ, ಬುರ್ಖಾ ತೊಟ್ಟ ವ್ಯಕ್ತಿ ಮಹಿಳೆಯಲ್ಲ ಪುರುಷ ಎಂಬುದು ಗೊತ್ತಾಗಿದೆ. ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ಮಾಡಿರುವ ತಂತ್ರ ಎಂದು ಅನುಮಾನಿಸಿ ಹಿಡಿದಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬುರ್ಖಾ ತೊಟ್ಟಿದ್ದ ವ್ಯಕ್ತಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಡಗೇರಿಯವರು. ಆತನ ಹೆಸರು ವೀರಭದ್ರಯ್ಯ ನಿಂಗಯ್ಯ (58) ಎಂದು ಗುರುತಿಸಲಾಗಿದೆ.
ಈತ ವಿಜಯಪುರದಿಂದ ಪ್ರಯಾಣ ಮಾಡುವಾಗ ಸಹ ಮಹಿಳೆಯೊಬ್ಬರ ಆಧಾರ್ ಕಾರ್ಡ್ ಸಹ ದುರ್ಬಳಕೆ ಮಾಡಿಕೊಂಡು ಬೆಂಗಳೂರು ತನಕ ಪ್ರಯಾಣ ಮಾಡಿದ್ದಾನೆ ತಿಳಿದು ಬಂದಿದೆ. ಇನ್ನು ಬೆಂಗಳೂರಿನಿಂದ ಸಂಶಿಗೆ ಟ್ರೇನ್ ನಲ್ಲಿ ಮಾತ್ರ ಬುರ್ಖಾ ಧರಿಸಿರಿಲಿಲ್ಲ ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ. ವೀರಭದ್ರಯ್ಯಾ ಯಾವುದೇ ರೀತಿಯ ಕೆಲಸ ಮಾಡದೇ ಹಾಗೇ ತಿರುಗಾಡುತಿದ್ದಾ ಶಕ್ತಿ ಯೋಜನೆ ಅಡಿಯ ಸಾರಿಗೆ ಬಸ್ ನಲ್ಲಿ ಸಹ ಪ್ರಯಾಣ ಮಾಡಲು ಬುರ್ಖಾ ಧರಿಸಿದ್ದಾನೆ ಎನ್ನಲಾಗಿದೆ.
ಸಾರ್ವಜನಿಕರು ಈ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ, ಆತ, “ನಾನು ಭಿಕ್ಷಾಟನೆಗೆ ಬಂದಿದ್ದೇನೆ. ನನ್ನ ಹೆಸರು ವೀರಭದ್ರಯ್ಯ ನಿಂಗಯ್ಯ ಮಠಪತಿ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಘೋಡಗೋರಿ ಗ್ರಾಮದವನು” ಎಂದು ಹೇಳಿದ್ದಾನೆ. ವೀರಭದ್ರಯ್ಯನ ಬಳಿ ಮಹಿಳೆಯ ಆಧಾರ್ ಕಾರ್ಡ್ ನಕಲು ಪ್ರತಿ ಸಿಕ್ಕಿದೆ. ಆರೋಪಿಯನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಂದಗೋಳ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾದ ದಿನದಿಂದ ಇಂಥ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಇತ್ತೀಚೆಗೆ, ಮೂರ್ನಾಲ್ಕು ಜನ ಯುವಕರು ಸೀರೆಯುಟ್ಟು ಬಸ್ಗಾಗಿ ಕಾಯುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಮನರಂಜನೆಗಾಗಿ ಮಾಡಲಾಗಿತ್ತಾದರೂ, ಧಾರವಾಡ ಜಿಲ್ಲೆಯಲ್ಲಿ ಇಂತಹದ್ದೇ ನೈಜ ಘಟನೆಯೂ ನಡೆದಿದೆ.
ಈ ಯೋಜನೆಯಲ್ಲಿ ಲಾಭ ಮಾಡಿಕೊಂಡು ಬಹಳಷ್ಟು ಮಂದಿ ಈ ಐಡಿಯಾ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂಬ ಅನುಮಾನ ಹುಟ್ಟಿಕೊಂಡಿದೆ. ಈ ಯೋಜನೆಯಲ್ಲಿ ಹೊರರಾಜ್ಯದಿಂದ ಇಲ್ಲಿಗೆ ಆಗಮಿಸಿ ವಾಸಿಸುತ್ತಿರುವವರಿಗೆ ಅವಕಾಶವಿಲ್ಲ. ಹೀಗಾಗಿ ಇದಕ್ಕಾಗಿ ಕೆಲವು ಮಹಿಳೆಯರು ದಾಖಲಾತಿಗಳನ್ನೇ ಬದಲಿಸಿಕೊಂಡಿದ್ದಾರೆ ಎಂಬ ಮಾತು ಸಹ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ರಾಜ್ಯ ಸರ್ಕಾರ ಮಹಿಳೆಯರಿಗೆ ಫ್ರೀ ಬಸ್ ಯೋಜನೆ ಘೋಷಿಸಿದ ಬಳಿಕ ಬಸ್ನಲ್ಲಿ ಮಹಿಳೆಯರ ಸಂಚಾರ ಗಣನೀಯವಾಗಿ ಏರಿಕೆ ಕಂಡಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್ಗಳಲ್ಲಿ ಒಂದೇ ದಿನದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 3 ಕೋಟಿ ದಾಟಿದೆ. ಯೋಜನೆಗೆ ಜೂನ್ 11ರಂದು ರಾಜ್ಯಾದ್ಯಂತ ಜಾರಿಯಾಗಿತ್ತು. ಜುಲೈ 4ರವರೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಒಟ್ಟು 3.15 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಒಟ್ಟು ಟಿಕೆಟ್ ಮೌಲ್ಯ 80.96 ಕೋಟಿ ರೂ. ಗಳಾಗಿದೆ.