ಮಗುವೊಂದು ಜನಿಸಿದಾಗ ಅದು 2.5Kg ತೂಕ ಇದ್ದರೆ ಅದನ್ನು ಆರೋಗ್ಯವಂತ ಮಗು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಕೆಲ ಗ್ರಾಂ ಗಳ ವ್ಯತ್ಯಾಸವಾದರೆ ಸಹಜ ಎನ್ನಬಹುದು. ಆದರೆ ಅಂದಾಜು ಇರದಂತೆ 500 ಗ್ರಾಂ ತೂಕ ಇದ್ದರೆ ಆ ಮಗು ಬದುಕಿ ಉಳಿಯುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಲಾಗುತ್ತದೆ.
ಆದರೂ ಕೂಡ ವೈದ್ಯ ಲೋಕ ಇದಕ್ಕೊಂದು ಪರಿಹಾರ ಕಂಡುಹಿಡಿದಿದ್ದು ಕಾಂಗರೂ ಚಿಕಿತ್ಸೆ (Kangaroo treatment) ನೀಡಲು ಸೂಚಿಸಲಾಗುತ್ತದೆ. ಕಾಂಗ್ರೆಸ್ ಚಿಕಿತ್ಸೆ ಎಂದರೆ ತೂಕ ಕಡಿಮೆ ಇರುವ ಮಕ್ಕಳನ್ನು ದಿನದಲ್ಲಿ 14ರಿಂದ 15 ಗಂಟೆಗಳ ಕಾಲ ಮಗುವಿನ ತಾಯಿಯು ಎದಗಪ್ಪಿಕೊಂಡಿರಬೇಕು.
ಇದರಿಂದ ಮಗುವಿನ ಸಹಜ ಉಸಿರಾಟಕ್ಕೆ ಸಹಾಯಕವಾಗುತ್ತದೆ ಮತ್ತು ನಿಧಾನವಾಗಿ ತೂಕ ಕೂಡ ಹೆಚ್ಚಾಗುತ್ತದೆ ಮಗು ಹಾಗೂ ತಾಯಿಯ ಭಾಂಧವ್ಯವು ವೃದ್ಧಿಯಾಗುತ್ತದೆ. ಆದರೆ ಈ ರೀತಿ ಚಿಕಿತ್ಸೆ ನೀಡಿದ ಮೇಲೂ ಕೂಡ ಎಲ್ಲಾ ಮಕ್ಕಳುಗಳು ಚೇತರಿಸಿಕೊಳ್ಳುತ್ತವೆ ಎಂದು ಹೇಳುವುದು ಕಷ್ಟ. ಆದರೆ ಇಲ್ಲಿ 500 ಗ್ರಾಂ ಇದ್ದ ಹೆಣ್ಣು ಮಗು ಕಿಮ್ಸ್ (KIMS) ವೈದ್ಯ ತಂಡ ಹಾಗೂ ಸಿಬ್ಬಂದಿ ಪಟ್ಟ ಶ್ರಮದಿಂದ ಚೇತರಿಸಿಕೊಂಡು 50 ದಿನಗಳಲ್ಲಿ 1.2Kg ವರೆಗೆ ಬೆಳವಣಿಗೆಯಾಗಿದೆ.
ಕೊಪ್ಪಳದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಾಯಿ ಮತ್ತು ಮಗುವಿನ ಆಸ್ಪತ್ರೆ ಇಂಥದೊಂದು ಪ್ರಕರಣಕ್ಕೆ ಸಾಕ್ಷಿಯಾಗಿದೆ. ಈ ಹಿಂದೆ ಕೂಡ ಈ ಆಸ್ಪತ್ರೆಯಲ್ಲಿ 700 ಗ್ರಾಂ ತೂಕ ಇರುವ ಮಗುವಿಗೆ ಕಾಂಗರೂ ಚಿಕಿತ್ಸೆ ನೋಡಿ ಬದುಕಿಸಿಕೊಂಡಿದ್ದ ಉದಾಹರಣೆ ಇತ್ತು. ತಿಂಗಳಿಗೆ 15 ರಿಂದ 20 ಮಕ್ಕಳಿಗೆ ಕಾಂಗರೂ ಚಿಕಿತ್ಸೆ ಸೂಚಿಸಲಾಗಿತ್ತಾದರೂ 500 ಗ್ರಾಂ ಮಗುವಿಗೆ ಚಿಕಿತ್ಸೆ ನೀಡಿ ಫಲಿಸಿದ್ದು ಇದೇ ಮೊದಲಾಗಿದೆ.
ಕೊಪ್ಪಳ ಜಿಲ್ಲೆಯ ಬೆಟಗೇರಿ ಗ್ರಾಮದ ಸಾರವ್ವ ಎನ್ನುವ ಮಹಿಳೆಗೆ ಹೆಣ್ಣು ಮಗುವಿನ ಜನನವಾಗಿತ್ತು. ಇದು ಎರಡನೇ ಮಗುವಾಗಿದ್ದು ಮೊದಲ ಮಗುವಿಗೆ ನಾಲ್ಕು ವರ್ಷ ವಯಸ್ಸಾಗಿದೆ. ಈ ಪ್ರಕರಣದಲ್ಲಿ ತಾಯಿಯ ಅಪೌಷ್ಟಿಕತೆ ಹಾಗೂ ಅವಧಿ ಪೂರ್ವ ಪ್ರಸವದ ಕಾರಣದಿಂದಾಗಿ ಮಗುವಿನ ತೂಕ ಕುಸಿದಿತ್ತು.
ಆಗಸ್ಟ್ 30 ರಂದು 7ನೇ ತಿಂಗಳಿನಲ್ಲಿಯೇ ಸಹಜ ಹೆರಿಗೆ ಮೂಲಕ ಹೆಣ್ಣು ಮಗು ಜನಿಸಿತ್ತು. ಮಗುವಿನ ತಲೆ, ಕರುಳು, ಚರ್ಮ, ಶ್ವಾಸಕೋಶ ಇನ್ನು ಸರಿಯಾಗಿ ಬೆಳದಿರಲಿಲ್ಲ. ಚರ್ಮದ ಸಮಸ್ಯೆ, ನಂಜಾಗುವುದು, ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎನ್ನುವ ಕಾರಣಕ್ಕಾಗಿ ಮಗುವನ್ನು 50 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಿ ಕಾಂಗರ್ ಚಿಕಿತ್ಸೆ ನೀಡಲಾಗಿತ್ತು.
ಈಗ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಕಾರಣ ಡಿಸ್ಚಾರ್ಜ್ ಮಾಡಲಾಗಿದೆ. ಆರೋಗ್ಯವಾಗಿದ್ದು ತಾಯಿ ಎದೆ ಹಾಲು ಕುಡಿಯುವಂತಾಗಿದೆ. ಈ ಬಗ್ಗೆ ಮಾತನಾಡುವ ಮಗುವಿನ ತಾಯಿ ಮಗು ಹುಟ್ಟಿದಾಗ ತೂಕ ಕಡಿಮೆ ಇದ್ದರಿಂದ ಯಾವ ರೀತಿ ಆರೈಕೆ ಮಾಡಬೇಕು ಎನ್ನುವುದು ತಿಳಿಯದಾಗಿತ್ತು ಆಸ್ಪತ್ರೆ ವೈದ್ಯರು ನನ್ನ ಪಾಲಿಗೆ ದೇವರಾಗಿ ಬಂದರು ಎಂದು ಕೃತಜ್ಞತೆ ತೋರುತ್ತಾರೆ.
ಮಕ್ಕಳ ವಿಭಾಗದ ನೋಡಲ್ ಅಧಿಕಾರಿ ಡಾ. ಸಿದ್ದಲಿಂಗ, ವೈದ್ಯರಾದ ಉದಯ್, ಮಲ್ಲನಗೌಡ, ಶಶಿಕಾಂತ್, ಹರ್ಷ ಹಾಗೂ ಆಸ್ಪತ್ರೆಯ ಸಿಬ್ಬಂದಿ ಮಗುವಿನ ತೂಕ ಹೆಚ್ಚಳಕ್ಕೆ ಮತ್ತು ಆರೋಗ್ಯ ಸುಧಾರಣೆಗೆ ಕಾರಣರಾಗಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆಯ ಮಕ್ಕಳ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ಗಿರೀಶ್ ಹಿರೇಮಠ ಅವರು ವೈದ್ಯ ತಂಡ ಮತ್ತು ಸಿಬ್ಬಂದಿ ವರ್ಗದ ಶ್ರಮವನ್ನು ಸ್ಮರಿಸಿ ಗೌರವಿಸಿದ್ದಾರೆ.