ಒಳ್ಳೆಯ ಶಿಕ್ಷಣವು ಉತ್ತಮ ಭವಿಷ್ಯಕ್ಕೆ ಸೋಪಾನ. ವೃತ್ತಿ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ, ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವುದು ಕೂಡ ಬಹಳ ಮುಖ್ಯವಾಗುತ್ತದೆ. ಆದರೆ, ಶಿಕ್ಷಣದ ವೆಚ್ಚ ದಿನದಿಂದ ದಿನಕ್ಕೆ ದುಬಾರಿ ಆಗುತ್ತಿರುವುದರಿಂದ ಬಯಸಿದ ಕೋರ್ಸ್ಅನ್ನು ಒಳ್ಳೆಯ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವುದು ಆರ್ಥಿಕವಾಗಿ ಸವಾಲಾಗಿ ಪರಿಣಮಿಸುತ್ತಿದೆ.
ಅಂದಾಜಿನ ಪ್ರಕಾರ, ವರ್ಷದಿಂದ ವರ್ಷಕ್ಕೆ ಶಿಕ್ಷಣದ ವೆಚ್ಚ ಶೇಕಡ 15ರಿಂದ ಶೇ 20ರಷ್ಟು ಹೆಚ್ಚಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಿಮಗೆ ಹಣಕಾಸಿನ ನೆರವು ಒದಗಿಸಲು ಶಿಕ್ಷಣ ಸಾಲ ನೆರವಿಗೆ ಬರುತ್ತದೆ.
1. ಶಿಕ್ಷಣ ಸಾಲ ಎಂದರೇನು?
ದೇಶ ಅಥವಾ ವಿದೇಶದಲ್ಲಿ ಶಿಕ್ಷಣದ ಉದ್ದೇಶಕ್ಕಾಗಿ ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಒದಗಿಸುವ ಹಣಕಾಸಿನ ನೆರವು ಇದು. ಬ್ಯಾಂಕುಗಳು, ಶೈಕ್ಷಣಿಕ ಅರ್ಹತೆ ಮತ್ತು ಅಧ್ಯಯನ ಮಾಡಲು ಬಯಸಿರುವ ಕೋರ್ಸ್ ಆಧರಿಸಿ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ಒದಗಿಸುತ್ತವೆ.
2. ಶಿಕ್ಷಣ ಸಾಲ ಯಾವುದಕ್ಕೆ ಹಣ ಒದಗಿಸುತ್ತದೆ?
ನಿರ್ದಿಷ್ಟ ಕೋರ್ಸ್ನ ಶುಲ್ಕ ಭರಿಸುವ ಜೊತೆಗೆ ವಸತಿ ವೆಚ್ಚ, ಪುಸ್ತಕ, ಇತರ ಪಾಠೋಪಕರಣಗಳ ಖರ್ಚಿಗೂ ಶಿಕ್ಷಣ ಸಾಲದ ಹಣವನ್ನು ಬಳಸಬಹುದು.
3. ಯಾರು ಅರ್ಜಿ ಸಲ್ಲಿಸಬಹುದು?
ವಿದ್ಯಾರ್ಥಿಗಳು ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ತಂದೆ-ತಾಯಿ, ಪತಿ-ಪತ್ನಿ, ಸೋದರ-ಸೋದರಿ ಸಹ-ಅರ್ಜಿದಾರ ಆಗಬಹುದು.
4. ಶಿಕ್ಷಣ ಸಾಲ ಯಾರಿಗೆ ಸಿಗುತ್ತದೆ?
ಭಾರತದಲ್ಲಿ ವಿದ್ಯಾಭ್ಯಾಸ ಮಾಡಬೇಕು ಎನ್ನುವವರಿಗೆ ಅಥವಾ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಬಯಸುವವರಿಗೆ ಶಿಕ್ಷಣ ಸಾಲ ಸಿಗುತ್ತದೆ. ₹50 ಸಾವಿರದಿಂದ ಹಿಡಿದು ₹1 ಕೋಟಿಯವರೆಗೂ ಸಾಲ ಸೌಲಭ್ಯವನ್ನು ಬ್ಯಾಂಕುಗಳು ಒದಗಿಸುತ್ತವೆ.
5. ಯಾವ ಕೋರ್ಸ್ಗಳಿಗೆ ಸಾಲ ಸಿಗುತ್ತದೆ?
ಶಿಕ್ಷಣ ಸಾಲವನ್ನು ಪಾರ್ಟ್ ಟೈಂ ಕೋರ್ಸ್, ಫುಲ್ ಟೈಂ ಕೋರ್ಸ್, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಆಡಳಿತ ನಿರ್ವಹಣೆ ಪದವಿ, ವೈದ್ಯಕೀಯ ಶಿಕ್ಷಣ, ಹೊಟೇಲ್ ಮ್ಯಾನೇಜ್ಮೆಂಟ್ ಸೇರಿದಂತೆ ಹಲವು ವೃತ್ತಿಪರ ಕೋರ್ಸ್ಗಳಿಗೆ ಪಡೆಯಬಹುದು. ಯಾವ ಕೋರ್ಸ್ಗೆ ಸಾಲ ಕೊಡಬಹುದು ಎನ್ನುವುದರ ನಿರ್ಣಯ ಮಾಡುವಾಗ ಬ್ಯಾಂಕಿನ ಪಾತ್ರವೂ ಮುಖ್ಯವಾಗುತ್ತದೆ.
6. ಅರ್ಹತೆಗಳೇನು?
ಶಿಕ್ಷಣ ಸಾಲ ಪಡೆಯುವ ವಿದ್ಯಾರ್ಥಿ ಭಾರತೀಯ ಪ್ರಜೆಯಾಗಿರಬೇಕು. ವಯಸ್ಸು 18ರಿಂದ 35 ವರ್ಷಗಳ ಒಳಗಿರಬೇಕು. ನಿರ್ದಿಷ್ಟ ವಿದ್ಯಾರ್ಥಿಗೆ ದೇಶ ಅಥವಾ ವಿದೇಶದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ದೊರಕುವುದು ಖಾತರಿಯಾಗಿರಬೇಕು. ಸಾಲ ಪಡೆಯಲು ವಿದ್ಯಾರ್ಥಿ ತಂದೆ-ತಾಯಿ, ಪತಿ-ಪತ್ನಿ ಅಥವಾ ಸೋದರ-ಸೋದರಿಯನ್ನು ಸಹ ಅರ್ಜಿದಾರರನ್ನಾಗಿಸುವುದು ಮುಖ್ಯವಾಗುತ್ತದೆ.
ಸಹ ಅರ್ಜಿದಾರರು ನಿಗದಿತ ಮಾಸಿಕ ಆದಾಯ ಹೊಂದಿರಬೇಕು. ಇದಲ್ಲದೆ ಅರ್ಜಿದಾರ ಶೈಕ್ಷಣಿಕ ದಾಖಲೆಗಳು, ಕೆವೈಸಿ ದಾಖಲೆಗಳನ್ನು ಒದಗಿಸಬೇಕು. ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಳ್ಳೆಯ ಕೋರ್ಸ್ಗೆ ಸೇರಲು ಸಾಲ ಕೋರಿ ಅರ್ಜಿ ಸಲ್ಲಿಸಿದಾಗ ಮತ್ತು ಉತ್ತಮ ಶ್ರೇಣಿ ಹೊಂದಿದ್ದಾಗ ಶಿಕ್ಷಣ ಸಾಲ ಬೇಗ ಸಿಗುತ್ತದೆ.
7. ಎಷ್ಟು ಮಾದರಿಯ ಸಾಲಗಳಿವೆ?
ಶಿಕ್ಷಣ ಸಾಲದಲ್ಲಿ ಎರಡು ಮಾದರಿಗಳಿವೆ. ಒಂದನೆಯದು ಭದ್ರತೆ (ಸೆಕ್ಯೂರ್ಡ್) ಆಧರಿಸಿ ನೀಡುವ ಸಾಲ. ಮತ್ತೊಂದು, ಭದ್ರತೆಯಿಲ್ಲದೆ (ಅನ್ ಸೆಕ್ಯೂರ್ಡ್) ನೀಡುವ ಸಾಲ. ಸಾಮಾನ್ಯವಾಗಿ ₹4 ಲಕ್ಷದವರೆಗಿನ ಸಾಲಕ್ಕೆ ಬ್ಯಾಂಕ್ಗಳು ಭದ್ರತೆ ಕೇಳುವುದಿಲ್ಲ. ಈ ಸಾಲಕ್ಕೆ ಬಡ್ಡಿ ದರ ಹೆಚ್ಚಿಗೆ ಇರುತ್ತದೆ.
ಬ್ಯಾಂಕುಗಳು ಪೋಷಕರನ್ನು ಸಹ ಅರ್ಜಿದಾರರನ್ನಾಗಿ ಮಾಡುತ್ತವೆ. ಇಂತಹ ಸಾಲಗಳನ್ನು ಭದ್ರತೆ (ಸೆಕ್ಯೂರ್ಡ್) ಸಾಲ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ವಿದ್ಯಾರ್ಥಿ ಸಾಲ ಮರುಪಾವತಿ ತಪ್ಪಿಸಿದರೆ ಪೋಷಕರು ಅದರ ಜವಾಬ್ದಾರಿ ಹೊರಬೇಕಾಗುತ್ತದೆ. ಸಾಮಾನ್ಯವಾಗಿ ₹4 ಲಕ್ಷದಿಂದ ₹8 ಲಕ್ಷದ ವರೆಗಿನ ಸಾಲಕ್ಕೆ ಜಾಮೀನುದಾರರು ಬೇಕಾಗುತ್ತಾರೆ. ಸಾಲದ ಮೊತ್ತ ₹8 ಲಕ್ಷಕ್ಕಿಂತ ಅಧಿಕವಾದರೆ ಕೃಷಿ ಭೂಮಿ, ನಿವೇಶನ, ಮನೆ, ಇನ್ನಿತರ ಆಸ್ತಿಗಳನ್ನು ಅಡಮಾನದ ರೂಪದಲ್ಲಿ ಇಡಬೇಕಾಗುತ್ತದೆ.
8. ಶಿಕ್ಷಣ ಸಾಲದ ಬಡ್ಡಿ ದರ
ಶಿಕ್ಷಣ ಸಾಲದ ಮೊತ್ತ ಮತ್ತು ಅವಧಿ ಆಧರಿಸಿ ಬಡ್ಡಿ ದರ ನಿರ್ಧಾರವಾಗುತ್ತದೆ. ಒಂದೊಂದು ಬ್ಯಾಂಕಿನಲ್ಲಿ ಒಂದೊಂದು ಮಾದರಿಯ ಬಡ್ಡಿ ದರವಿದೆ. ಸಾಮಾನ್ಯವಾಗಿ ಶೇ 8.20ರಿಂದ ಶೇ 16ರವರೆಗೂ ಬಡ್ಡಿ ವಿಧಿಸಲಾಗುತ್ತದೆ. ರೆಪೊ ದರಕ್ಕೆ ಅನುಗುಣವಾಗಿ ಅದು ಬದಲಾಗುತ್ತದೆ.
9. ಸಾಲ ಮರುಪಾವತಿ ಹೇಗೆ?
ಸಾಮಾನ್ಯವಾಗಿ ಕೋರ್ಸ್ ಮುಗಿಸಿದ 1 ವರ್ಷ ಅಥವಾ ಕೆಲಸಕ್ಕೆ ಸೇರಿದ 6 ತಿಂಗಳ ಬಳಿಕ ಶಿಕ್ಷಣ ಸಾಲದ ಮರುಪಾವತಿ ಆರಂಭವಾಗುತ್ತದೆ. ಸಾಲದ ಮರುಪಾವತಿಗೆ 5ರಿಂದ 7 ವರ್ಷಗಳ ಮಿತಿಯಿದ್ದರೂ ಬ್ಯಾಂಕಿಗೆ ಮನವಿ ಸಲ್ಲಿಸಿ ಅವಧಿ ವಿಸ್ತರಿಸಿಕೊಳ್ಳಬಹುದು. ಪಡೆದಿರುವ ಸಾಲಕ್ಕೆ ಕೋರ್ಸ್ನ ಅವಧಿಯಲ್ಲಿ ಬ್ಯಾಂಕ್ ಬಡ್ಡಿಯನ್ನು ವಿಧಿಸುತ್ತದೆ. ಅದನ್ನೂ ಸೇರಿಸಿ ಮರುಪಾವತಿ ಮಾಡಬೇಕಾಗುತ್ತದೆ.
10. ತೆರಿಗೆ ವಿನಾಯಿತಿ ಏನು?
ಶಿಕ್ಷಣ ಸಾಲದ ಮೇಲಿನ ಬಡ್ಡಿ ಪಾವತಿಗೆ ಆದಾಯ ತೆರಿಗೆಯ ಸೆಕ್ಷನ್ 80ಇ ಅಡಿ ವಿನಾಯಿತಿ ಸಿಗುತ್ತದೆ. ತೆರಿಗೆ ವಿನಾಯಿತಿಯನ್ನು ವಿದ್ಯಾರ್ಥಿ ಅಥವಾ ಆತನ ಪೋಷಕರು ಪಡೆದುಕೊಳ್ಳಬಹುದು. ಉದಾಹರಣೆಗೆ ತೆರಿಗೆಗೆ ಒಳಪಡುವ ನಿಮ್ಮ ವಾರ್ಷಿಕ ಆದಾಯ ₹12 ಲಕ್ಷವಿದ್ದು ₹2 ಲಕ್ಷವನ್ನು ಶಿಕ್ಷಣ ಸಾಲದ ಬಡ್ಡಿ ಬಾಬ್ತಿಗೆ ಕಟ್ಟಿದ್ದೀರಿ ಎಂದಾದರೆ ₹10 ಲಕ್ಷದ ಮೇಲೆ ಮಾತ್ರ ತೆರಿಗೆ ಕಟ್ಟಬೇಕಾಗುತ್ತದೆ. ₹12 ಲಕ್ಷದ ಮೇಲೆ ತೆರಿಗೆ ಕಟ್ಟಬೇಕಾಗುವುದಿಲ್ಲ.
ಶಿಕ್ಷಣ ಸಾಲ ಒಂದು ಒಳ್ಳೆಯ ಸಾಧನ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ನಿಮಗೆ ನೌಕರಿ ಖಾತರಿಪಡಿಸದ ಕೋರ್ಸ್ಗಳನ್ನು ಓದಲು ಶಿಕ್ಷಣ ಸಾಲ ಪಡೆಯಬೇಡಿ. ಇದರಿಂದ ಯಾವುದೇ ಪ್ರಯೋಜನವಾಗದು. ಸಾಲದ ಹೊರೆ ಅನಗತ್ಯವಾಗಿ ನಿಮ್ಮ ಮೇಲೆ ಬೀಳುತ್ತದೆ.